ADVERTISEMENT

ದೇವಾಲಯಗಳ ಬದಲು ಶಾಲೆ ನಿರ್ಮಿಸಿ

ಚಿಕ್ಕಜಾಜೂರು: ಸಿದ್ಧೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಆಂಜನೇಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 7:37 IST
Last Updated 4 ಫೆಬ್ರುವರಿ 2017, 7:37 IST
ಚಿಕ್ಕಜಾಜೂರು: ‘ದೇವರಲ್ಲಿ ಭಕ್ತಿ ಇರಲಿ. ಆದರೆ, ಆಡಂಬರ ಬೇಡ. ದೇವಾಲಯಗಳ ಬದಲಿಗೆ ಶಾಲೆಗಳನ್ನು ನಿರ್ಮಿಸಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ. ಮಕ್ಕಳು ಉನ್ನತ ವ್ಯಾಸಂಗ ಮಾಡಿದರೆ ಇಡೀ ಗ್ರಾಮಕ್ಕೇ ಕೀರ್ತಿ ತರುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ನುಡಿದರು.
ಸಮೀಪದ ಅಂದನೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಿದ್ಧೇಶ್ವರ ಸ್ವಾಮಿ, ಗಂಗಾಪರಮೇಶ್ವರಿ ದೇವಸ್ಥಾನಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ಇಂದಿನ ಸ್ಥಿತಿಯಲ್ಲಿ ಮಳೆ– ಬೆಳೆಗಳನ್ನು ಕಾಯುವಂತಿಲ್ಲ. ಬಡವರು ಬಡವರಾಗಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜ್ಞಾನಕ್ಕೆ ಆದ್ಯತೆ ನೀಡಿದರೆ, ಬದುಕು ರೂಪಿಸಿಕೊಳ್ಳಲು ನೆರವಾಗಲಿದೆ’ ಎಂದರು. 
 
‘ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ಗ್ರಾಮದ ಕೆರೆಗೆ ನೀರು ತುಂಬಿಸುವ ಯೋಜನೆ ಇದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿನ 23 ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು   ಅವರು ಹೇಳಿದರು. 
 
ಮುರುಘಾ ಮಠದ ಪೀಠಾಧ್ಯಕ್ಷ  ಶಿವಮೂರ್ತಿ ಶರಣರು, ‘ಮನುಷ್ಯ ದೇವಸ್ಥಾನ, ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ ಜನರ ಮನದಲ್ಲಿ ದೈವೀ ಭಾವನೆ ಬೆಳಸಿ, ಸನ್ಮಾರ್ಗದತ್ತ ಕೊಂಡೊಯ್ಯಬೇಕು. ಜನ ಕಷ್ಟ ಕಾಲದಲ್ಲಿ ದೇವಸ್ಥಾನ ನಿರ್ಮಿಸುತ್ತಾರೆ. ಆದರೆ, ಅವರಲ್ಲಿ ಸದಾ ಕಾಲ ದೈವೀ ಭಾವನೆ ಇರುವುದಿಲ್ಲ’ ಎಂದು ಹೇಳಿದರು.
 
ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ‘ದೇಹ ಮಂದಿರದಂತೆ ಸುಂದರ, ಪವಿತ್ರವೂ ಆಗಿದೆ. ದೇಗುಲದಂತೆ ನಮ್ಮ ಆತ್ಮ ಪರಿಶುದ್ಧವಾಗಿರಬೇಕು’ ಎಂದು ಹೇಳಿದರು.
 
ಕಾಗಿನೆಲೆ ಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಶಾಸಕರಾದ ಎಂ. ಚಂದ್ರಪ್ಪ, ಎ.ವಿ.ಉಮಾಪತಿ, ಪಿ.ರಮೇಶ್‌ ಮಾತನಾಡಿದರು. 
 
ವಾಲ್ಮೀಕಿ ಗುರು ಪೀಠಾಧ್ಯಕ್ಷರಾದ ಪ್ರಸನ್ನಾನಂದಪುರಿ ಸ್ವಾಮೀಜಿ, ನರಸೀಪುರದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಸ್ಲಿಂ ಸಮುದಾಯದ ಪ್ಯಾರೆಜಾನ್‌ ಸಾಬ್‌ ಸರ್ವಧರ್ಮದ ಸಾರ ತಿಳಿಸಿದರು.
 
ಇದಕ್ಕೂ ಮುನ್ನ ಬೆಳಿಗ್ಗೆ ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಿದರು.
 
ದೇವಸ್ಥಾನ ಹಾಗೂ ಗೋಪುರ ನಿರ್ಮಾಣಕ್ಕೆ ಧನಸಹಾಯ ನೀಡಿದ ತಾಲ್ಲೂಕು ಪಂಚಾಯ್ತಿ ಸದಸ್ಯ ಪಿ.ಎಸ್‌. ಮೂರ್ತಿ, ಅವರ ತಾಯಿ, ಈರಮ್ಮ, ಮುರುಗೇಶ್‌ ಹಾಗೂ ಶಿಲ್ಪಿಗಳಾದ ಕರ್ಷಯ್ಯಾಚಾರ್‌, ನಾಗರಾಜ್‌, ಮಂಜಣ್ಣ, ವೀರಾಚಾರಿ ಅವರನ್ನು ಸನ್ಮಾನಿಸಲಾಯಿತು. 
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಾ ಲಿಂಗರಾಜು, ಗಿರೀಶ್‌, ನೀಲಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಜಣ್ಣ, ರಾಜಶೇಖರ್‌, ರಂಗಸ್ವಾಮಿ, ಎಚ್‌.ಟಿ. ಹನುಮಂತಪ್ಪ ಹಾಜರಿದ್ದರು. 
 
**
ಲಿಂಗಾಯತ ಸಮುದಾಯ ಧಾರ್ಮಿಕ ನಂಬಿಕೆ, ಸಿದ್ಧಾಂತಗಳಿಂದ ದೂರ ಉಳಿದು ಡಾಂಬಿಕ ಆಚರಣೆ ನಡೆಸುತ್ತಿರುವುದು ವಿಷಾದದ ಸಂಗತಿ.
-ಶಿವಮೂರ್ತಿ ಮರುಘಾ ಶರಣರು,
ಮುರುಘಾ ಮಠ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.