ADVERTISEMENT

ನಾಳೆ ಆಂಜನೇಯಸ್ವಾಮಿ ದೇಗುಲ ಲೋಕಾರ್ಪಣೆ

ಹೊಸದುರ್ಗ ತಾಲ್ಲೂಕಿನ ಹೊನ್ನೇನಹಳ್ಳಿ ಫೆ. 3ರಿಂದ 7ರವರೆಗೆ ವಿವಿಧ ಧಾರ್ಮಿಕ ಸಮಾರಂಭ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:19 IST
Last Updated 2 ಫೆಬ್ರುವರಿ 2017, 6:19 IST
ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊನ್ನೇನಹಳ್ಳಿಯಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಗೊಂಡಿರುವ ಆಂಜನೇಯ ಸ್ವಾಮಿ ದೇಗುಲ ಲೋಕಾರ್ಪಣೆ ಧಾರ್ಮಿಕ ಸಮಾರಂಭ ಫೆ. 3ರಿಂದ 7ರ ವರೆಗೆ ನಡೆಯಲಿದೆ.
 
‘ಇಲ್ಲಿನ ಆಂಜನೇಯಸ್ವಾಮಿ ಮೂರ್ತಿಯನ್ನು ಸುಮಾರು 800 ವರ್ಷಗಳ ಹಿಂದೆ ವ್ಯಾಸರಾಯರು ಕೆತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಈ ಗ್ರಾಮ ಚಿನ್ನ, ಬೆಳ್ಳಿ, ವಜ್ರದ ಬೀಡಾಗಿದ್ದರಿಂದ ಈ ಗ್ರಾಮಕ್ಕೆ ಹೊನ್ನಿನಹಳ್ಳಿ ಎಂದು ಕರೆಯುತ್ತಿದ್ದರು’ ಎಂದು ಇಲ್ಲಿನ ಶಿಲಾ ಶಾಸನ ಹೇಳುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರು.
 
ಇಂತಹ ಭವ್ಯ ದೇಗುಲದ ಲೋಕಾರ್ಪಣೆಯ ಧಾರ್ಮಿಕ ಪೂಜಾ ಕಾರ್ಯ ನೆರವೇರಿಸಲು ಬೆಳ್ತಂಗಡಿಯ ಶೈವಾಗಮರೀತ್ಯ ಪಂಡಿತರಾದ ಗೋಪಾಲಕೃಷ್ಣ ತಂತ್ರಿ ಋತ್ವಿಜರು ಫೆ. 3ಕ್ಕೆ ಬರಲಿದ್ದಾರೆ. ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಗಂಗಾಪೂಜೆ ನೆರವೇರಿ ಸುವ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
 
ಹೊನ್ನೇನಹಳ್ಳಿ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ 51 ದೇವರ ಕೂಡುಭೇಟಿ ಸಮಾರಂಭ ಫೆ. 4ರಂದು ನಡೆಯಲಿದೆ. ಫೆ. 5ರಂದು ದೇವರ ಸಮ್ಮುಖದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮುಹೂರ್ತ, ಗಣಪತಿ ಹೋಮ, ರುದ್ರಾಭಿಷೇಕ, ಪಲ್ಲವಪೂಜೆ, ಭೂತರಾಜ ಪ್ರಧಾನ ಹೋಮ, ರಾಕ್ಷೋಘ್ನ ಹೋಮ, ವಾಸ್ತು ಹಾಗೂ ಪ್ರಾಕಾರ ಬಲಿ, ನವಗ್ರಹಗಳ ಪ್ರತಿಷ್ಠಾಪನೆ, ನವಗ್ರಹ ಹೋಮ, ಅನುಜ್ಞಾ ಕಳಸಾಭಿಷೇಕ, ಮಹಾಪೂಜೆ ಮಂಟಪ ಸಂಸ್ಕಾರ, ಕುಂಬೇಶ ಕರ್ಕರಿ ಪೂಜೆ ನಡೆಯಲಿದೆ.
 
ಧಾರ್ಮಿಕ ಸಭೆ: ಫೆ. 5ರ ಭಾನುವಾರ ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಬೆಲಗೂರಿನ ಬಿಂದು ಮಾಧವಶರ್ಮ ಸ್ವಾಮೀಜಿ, ಬೆಂಗಳೂರಿನ ಶಿರಡಿ ಸಾಯಿ ಶರಣಾಲಯದ ಗೋವಿಂದಗಿರಿ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್‌ ಧಾರ್ಮಿಕ ಸಭೆ ಉದ್ಘಾಟಿಸಲಿದ್ದಾರೆ. 
 
ಗೋಪುರ ಕಳಶಾರೋಹಣ: ಫೆ. 6ಕ್ಕೆ ಮುಂಜಾನೆ 6ಕ್ಕೆ ದೇಗುಲ ಗೃಹಪ್ರವೇಶ, ಕಳಶಾರೋಹಣ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.  ಶಿವಮೂರ್ತಿ ಮುರುಘಾ ಶರಣರು, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಸರಸ್ವತಿ ಸ್ವಾಮೀಜಿ, ಮಾರ್ಕಾಂಡಮುನಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.  
ಸೀತಾ ಕಲ್ಯಾಣೋತ್ಸವ: ಫೆ. 7ರಂದು ಸತ್ಯನಾರಾಯಣ ವ್ರತಾಚರಣೆ, ಸೀತಾ ಕಲ್ಯಾಣೋತ್ಸವ, ಆಂಜನೇಯಸ್ವಾಮಿ ಹಾಗೂ ಕೆರೆಯಾಗಳಮ್ಮ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಐದು ದಿನ ನಡೆಯುವ ಇಂತಹ ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರತಿದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸ ಲಾಗಿದೆ.  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಕೋರಲಾಗಿದೆ.
 
**
ಮನವಿ
ದೇಗುಲಕ್ಕೆ ದೇಣಿಗೆ ನೀಡುವವರು ದೇವಪುರದ ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆ ನಂ– 3843101000996ಗೆ ಹಣ ಪಾವತಿ ಸಬಹುದು ಎಂದು ಆಂಜನೇಯ ಸ್ವಾಮಿ ದೇಗುಲದ ಅಭಿವೃದ್ಧಿ ಸೇವಾ ಟ್ರಸ್ಟ್‌ ಮನವಿ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.