ADVERTISEMENT

ನಿಂತ ನೀರು: ಸಾಂಕ್ರಾಮಿಕ ರೋಗದ ಭೀತಿ

ಕೆ.ಎಸ್.ಪ್ರಣವಕುಮಾರ್
Published 17 ಜುಲೈ 2017, 8:45 IST
Last Updated 17 ಜುಲೈ 2017, 8:45 IST

ಚಿತ್ರದುರ್ಗ: ಮಳೆಗಾಲ ಈಗಾಗಲೇ ಪ್ರಾರಂಭವಾಗಿದೆ. ಜೋರು ಮಳೆಯಾದಾಗ ಮಳೆ ನೀರಿನ ಜತೆಗೆ ಚರಂಡಿಯ ಕೊಳಚೆಯೂ ಮಿಶ್ರಣಗೊಂಡು ಕೆಲವು ಬಡಾವಣೆಗಳ ರಸ್ತೆಗಳಲ್ಲಿ ಹರಿಯುತ್ತಿದೆ. ಇದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದೆ. ಅಲ್ಲದೆ, ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.

ಇಲ್ಲಿನ ಆದಿಶಕ್ತಿ ನಗರ, ರಾಮ್‌ದಾಸ್ ಕಾಂಪೌಂಡ್, ಗೋಪಾಲಪುರ ರಸ್ತೆ ಮಾರ್ಗದ ಹಿಂಭಾಗ, ಕೆಳಗೋಟೆ, ಭೋವಿ ಕಾಲೊನಿ, ಜೆ.ಜೆ. ಹಟ್ಟಿ ಹಾಗೂ ಹಲವೆಡೆ ರಭಸವಾಗಿ ಮಳೆ ಸುರಿದಾಗ ರಸ್ತೆಗಳ ಮೇಲೆಲ್ಲ ಚರಂಡಿ ನೀರು ಹರಿಯುವುದು ಸಾಮಾನ್ಯವಾಗಿದೆ.

ಕಸ ವಿಲೇವಾರಿ ನಡುವೆಯೂ ಸಮಸ್ಯೆ:  ಚರಂಡಿಗಳಲ್ಲಿ ತುಂಬಿದ ಕಸವನ್ನು ಆಗಿಂದಾಗ್ಗೆ ನಗರಸಭೆ ಸಿಬ್ಬಂದಿ ವಿಲೇವಾರಿ ಮಾಡುತ್ತಿದ್ದರೂ ಸಮರ್ಪಕ ವ್ಯವಸ್ಥೆ ಇಲ್ಲದ ಕೆಲವೆಡೆ ಶೀಘ್ರದಲ್ಲೇ ತುಂಬಿಕೊಳ್ಳುವ ಕೊಳಚೆ ನೀರು ಮಳೆಗಾಲದ ಸಂದರ್ಭದಲ್ಲಿ ಹೊರಗೆ ಹರಿದು ರಸ್ತೆಗಳ ಮೇಲೆ ನಿಲ್ಲುತ್ತಿದೆ.

ADVERTISEMENT

ಇಂತಹ ಮಾರ್ಗಗಳಲ್ಲಿ ಸಂಚರಿಸುವಾಗ ಕೊಳಚೆ ನೀರು ನಾಗರಿಕರಿಗೆ ಸಿಡಿಯುತ್ತದೆ. ಅಲ್ಲದೆ, ಇದೇ ನಿಂತ ನೀರ ಮೇಲೆ ಮಕ್ಕಳು ಆಟವಾಡಲು ಮುಂದಾಗುತ್ತಾರೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ರಾಮ್‌ದಾಸ್‌ ಕಾಂಪೌಂಡ್‌ ಮಾರ್ಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ಉಮೇಶ್ ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

ಚರಂಡಿ ನೀರು ಮನೆಗಳಿಗೂ ನುಗ್ಗುವ ಆತಂಕ: ನಗರದ ಅನೇಕ ಬಡಾವಣೆಗಳು ತಗ್ಗು ಪ್ರದೇಶದಲ್ಲಿದ್ದು, ಮಳೆ ಸುರಿದಾಗ ನೀರು ನುಗ್ಗುವುದು ಸಾಮಾನ್ಯವಾಗಿದೆ. ಆ ನೀರಿನ ಜತೆಗೆ ಚರಂಡಿ ನೀರೂ ಮನೆಗಳಿಗೆ ನುಗ್ಗುತ್ತದೆ. ಆಗ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಒಮ್ಮೊಮ್ಮೆ ಇದೇ ಚರಂಡಿ ನೀರು ಕೆಲವೆಡೆ ಕುಡಿಯುವ ನೀರಿನೊಂದಿಗೆ ಮಿಶ್ರಣವಾಗುತ್ತದೆ ಎನ್ನುತ್ತಾರೆ ಈಚೆಗಷ್ಟೆ ಈ ಸಮಸ್ಯೆ ಎದುರಿಸಿದ ಮೆದೇಹಳ್ಳಿ ರಸ್ತೆ ಮಾರ್ಗದ ನಿವಾಸಿ ರಮೇಶ್, ಜೆಸಿಆರ್‌ ಬಡಾವಣೆ ನಿವಾಸಿ ಮಧು.

‘ರಾತ್ರಿ ಮಳೆ ಸುರಿದರಂತೂ ಕೆಲವೆಡೆ ನಾಗರಿಕರಿಗೆ ಜಾಗರಣೆ ತಪ್ಪಿದ್ದಲ್ಲ. ಸುಮಾರು ವರ್ಷಗಳಿಂದ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ. ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕುರಿತು ಹೆಚ್ಚಿನ ಗಮನಹರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರಾಮ್‌ದಾಸ್‌ ಕಾಂಪೌಂಡ್‌ನ ಕೆಲ ನಿವಾಸಿಗಳು.

ಸಾಂಕ್ರಾಮಿಕ ರೋಗದ ಭೀತಿ: ಚರಂಡಿ ನೀರು ರಸ್ತೆಗಳ ಮೇಲೆ ಹರಿದರೆ, ನಾಯಿ ಹಾಗೂ ಹಂದಿಗಳು ಚರಂಡಿಯಿಂದ ಬರುವ ಕಸದ ರಾಶಿಯನ್ನು ಚೆಲ್ಲಾಪಿಲ್ಲಿಗೊಳಿಸಿ ವಾತಾವರಣ­ವನ್ನು ಮತ್ತಷ್ಟು ಗಲೀಜು ಮಾಡು­ತ್ತವೆ. ಇದರಿಂದಾಗಿ ನಾಗರಿಕರು ಸಾಂಕ್ರಾಮಿಕ ರೋಗದ ಭೀತಿ ಎದುರಿಸಬೇಕಾಗುತ್ತದೆ. ಆದ್ದರಿಂದ ನಗರದ ವಿವಿಧೆಡೆ ಈಗಾಗಲೇ ಮಾಡಿರುವಂತೆ ಚರಂಡಿಯೊಳಗೆ ನೀರು ಸರಾಗವಾಗಿ ಹರಿಯುವಂಥ ಯೋಜನೆಯನ್ನು ಎಲ್ಲೆಡೆಗೆ ವಿಸ್ತರಿಸಬೇಕು. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಮುರಳಿ, ಮಂಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.