ADVERTISEMENT

ನೋಂದಾಯಿತ ಹಮಾಲರಿಗೆ ಅವಕಾಶ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:01 IST
Last Updated 3 ಜನವರಿ 2017, 9:01 IST

ಚಿತ್ರದುರ್ಗ:  ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗದ ಹಮಾಲರಿಗೆ ಕೆಲಸಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಚಳ್ಳಕೆರೆ ನಗರದ ಲೋಡಿಂಗ್ ಮತ್ತು ಅನ್ ಲೋಡಿಂಗ್ ಹಮಾಲರ ಸಂಘ ಎಐಟಿಯುಸಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. ನಂತರ ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಎಪಿಎಂಸಿ ಹಮಾಲರ ಮುಖಂಡರು ಗ್ರಾಮೀಣ ಭಾಗದ ಜನರಿಂದ ₹ 3ರಿಂದ ₹ 5 ಸಾವಿರದವರೆಗೆ ಹಣ ಪಡೆದು ₹ 120 ರಂತೆ ರಸೀದಿ ಹಾಕುತ್ತಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಜನರನ್ನು ನಾವು ಕೆಲಸ ಮಾಡುವ ಸ್ಥಳದಲ್ಲಿ ಲೋಡ್ ಮತ್ತು ಅನ್ ಲೋಡ್ ಮಾಡಲು ಬಿಟ್ಟಿದ್ದಾರೆ. ಇದರಿಂದ ನಮ್ಮ  ಆದಾಯಕ್ಕೆ ತೊಂದರೆಯಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ನಗರದಲ್ಲಿ ಸುಮಾರು 50 ವರ್ಷಗಳಿಂದ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುತ್ತಿರುವ ನೋಂದಾಯಿತ ಹಮಾಲರಿಗೆ  ಕೆಲವರಿಂದಾಗಿ ತುಂಬಾ ತೊಂದರೆ ಆಗುತ್ತಿದೆ.  ನೋಂದಾಯಿತ ಹಮಾಲರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದರ ಜತೆಗೆ ನಮ್ಮ ಕೆಲಸಕ್ಕೆ   ಯಾವುದೇ ರೀತಿಯ ತೊಂದರೆ ಆಗದಂತೆ ತಡೆಯಬೇಕು’ ಎಂದರು.

ಚಳ್ಳಕೆರೆ ಲೋಡಿಂಗ್ ಮತ್ತು ಅನ್ ಲೋಡಿಂಗ್ ಹಮಾಲರ ಸಂಘದ ಕಾರ್ಯದರ್ಶಿ ಓ.ಚಿನ್ನಯ್ಯ, ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ವೀರೇಶ್, ಖಚಾಂಚಿ ನಸೀರ್‌ವುದ್ದೀನ್, ಎಐಕೆಎಸ್ ದೊಡ್ಡಉಳ್ಳಾರ್ತಿ ಕರಿಯಣ್ಣ, ಎಐಟಿ ಯುಸಿ ರಾಜ್ಯ ಮುಖಂಡ ಸಿ.ವೈ. ಶಿವರುದ್ರಪ್ಪ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.