ADVERTISEMENT

ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಲಿ

ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನದಲ್ಲಿ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:44 IST
Last Updated 11 ಜುಲೈ 2017, 6:44 IST

ಚಿತ್ರದುರ್ಗ: ‘ಪ್ರಜಾಪ್ರಭುತ್ವದಲ್ಲಿ ಪಂಚಾಯತ್ ರಾಜ್ ಬಹುಮುಖ್ಯ ವ್ಯವಸ್ಥೆಯಾಗಿದ್ದು, ಗ್ರಾಮೀಣ ಮಟ್ಟ ದಿಂದಲೇ ಅದನ್ನು ಹೆಚ್ಚು ಬಲಪಡಿಸುವ ಅವಶ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಆರ್.ಸುದರ್ಶನ್ ಸಲಹೆ ನೀಡಿದರು.

ಜಿಲ್ಲಾ ಕ್ರೀಡಾ ಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ ಹಾಗೂ ಪ್ರತಿನಿಧಿಗಳ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನಿಂದ ಮಾತ್ರ ರಾಷ್ಟ್ರ ಮತ್ತು ರಾಜ್ಯದಲ್ಲಿ ಆಡಳಿತ ವಿಕೇಂದ್ರೀ ಕರಣ ಸಾಧ್ಯವೇ ಹೊರತು ಬಿಜೆಪಿ ಯಿಂದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಬಿಜೆಪಿಗೆ ಈ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಹೇಳಿದರು.

ADVERTISEMENT

‘ನರೇಗಾ ಯೋಜನೆಯು ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ಈ ಯೋಜನೆಯಿಂದಲೇ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಈ ಯೋಜನೆಗೆ ಪ್ರಸ್ತುತ ಕೇಂದ್ರ ಸರ್ಕಾರದಿಂದ ಸಮರ್ಪಕವಾದ ಅನು ದಾನ ಬರುತ್ತಿಲ್ಲ. ಜಿಲ್ಲಾ ಪಂಚಾಯ್ತಿಗೆ ಇದ್ದಂಥ ಅಧಿಕಾರವನ್ನು ಕೂಡ ಕಸಿದುಕೊಂಡಿದೆ’ಎಂದು ದೂರಿದರು.

ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾಮಟ್ಟದ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಗ್ರಾಮ ಮಟ್ಟದಲ್ಲಿ ನಾಗರಿಕರನ್ನು ಒಗ್ಗೂಡಿಸಿ, ಪಂಚಾಯತ್‌ ರಾಜ್‌ನ ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕಿದೆ. ಗ್ರಾಮದ ಸಮಸ್ಯೆಗಳ ಬಗ್ಗೆ ದನಿ ಎತ್ತುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಗ್ರಾಮ ಮಟ್ಟದಲ್ಲಿ ಹೊಸ ನಾಯಕರನ್ನು ಗುರುತಿಸಿ, ಕಾಂಗ್ರೆಸ್‌ನಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಲು ಪ್ರೋತ್ಸಾಹಿಸಬೇಕು. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಜನತೆಗೆ ವಿವರಿಸುವ ಕೆಲಸ ಮಾಡಬೇಕು. ಪಕ್ಷಕ್ಕೆ ಶಕ್ತಿ ತುಂಬಲಿಕ್ಕೆ ಹೆಚ್ಚು ಒತ್ತು ನೀಡಿ ತಳಮಟ್ಟದಿಂದ ಸಂಘಟಿಸಬೇಕು ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್, ಮಾಜಿ ಸಂಸದ ನಾರಾಯಣ ಸ್ವಾಮಿ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಮುಖಂಡರಾದ ಮೆಹಬೂಬ್‌ ಪಾಷಾ, ಅಲ್ಲಾಬಕ್ಷ, ಹನುಮಲಿ ಷಣ್ಮುಕಪ್ಪ, ಜಯಮ್ಮ ಬಾಲರಾಜ್, ಬಿ.ಟಿ.ಜಗದೀಶ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ನಾಗೇಂದ್ರ ನಾಯ್ಕ್, ಯೋಗೇಶ್‌ಬಾಬು ಇದ್ದರು.

***

ಸಂಸತ್‌ನಲ್ಲಿ ನಡೆಯದ  ಗಂಭೀರ ಚರ್ಚೆ
ಪ್ರಸ್ತುತ ಸಂಸತ್‌ ಅಧಿವೇಶನ ನೋಡಿದರೆ ಈ ಹಿಂದಿನ ಜಿಲ್ಲಾ ಪಂಚಾಯ್ತಿ ಸಭೆಗಳೇ ಚೆನ್ನಾಗಿತ್ತು ಅನಿಸುತ್ತಿದೆ. ಗಂಭೀರ ಚರ್ಚೆಗಳೇ ಅಲ್ಲಿ ನಡೆಯುತ್ತಿಲ್ಲ ಎಂದು ಸಂಸದ ಬಿ.ಎನ್.ಚಂದ್ರಪ್ಪ ದೂರಿದರು.

ಜಿಲ್ಲಾ ಪಂಚಾಯ್ತಿಯ ಅಧಿಕಾರವನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಈ ಕೆಲಸ ಮಾಡಿಲ್ಲ. ಬದಲಿಗೆ ಮತ್ತಷ್ಟು ಅಧಿಕಾರ ನೀಡುವ ಮೂಲಕ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.