ADVERTISEMENT

ಪರಿಸರದೊಂದಿಗೆ ಹತ್ತಿರವಿದ್ದಷ್ಟು ಕ್ಷೇಮ

ವಸಂತ ಶಿಬಿರದಲ್ಲಿ ನ್ಯಾಯಾಧೀಶ ಹಂಚಾಟೆ ಸಂಜೀವ್‌ ಕುಮಾರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:58 IST
Last Updated 25 ಏಪ್ರಿಲ್ 2014, 6:58 IST

ಚಿತ್ರದುರ್ಗ: ಮಾನವ ಪರಿಸರ ದೊಂದಿಗೆ ಬೆರೆತು ಅದರೊಟ್ಟಿಗೆ ಬೆಳೆದಾಗ ಹೆಚ್ಚಿನ ಅನಾಹುತ ತಪ್ಪುತ್ತವೆ. ಪ್ರಕೃತಿಯಿಂದ ದೂರವಾದಷ್ಟು ವಿವಿಧ ರೀತಿಯ ದುಷ್ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಹಂಚಾಟೆ ಸಂಜೀವ್‌ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಆಡುಮಲ್ಲೇಶ್ವರ ಕಿರು ವನ್ಯದಾಮದಲ್ಲಿ ಗುರುವಾರ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಐಶ್ವರ್ಯ ಅಸೋಸಿಯೇಟ್ಸ್, ಚೈತ್ರ ಸಾಹಸ ಅಕಾಡೆಮಿ, ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ವಸಂತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಇತ್ತೀಚೇಗೆ ಪರಿಸರವನ್ನು ದೂರವಿಟ್ಟು ಬಾಳುವುದಕ್ಕೆ ಮುಂದಾಗಿದ್ದಾನೆ. ಅದರ ಪರಿಣಾಮ ಬರ, ಅತಿವೃಷ್ಟಿ, ನೀರಿನ ಸಮಸ್ಯೆ ಯಂತಹ ವಿವಿದ ದುಷ್ಪರಿಣಾಮ ಎದುರಿಸುತ್ತಿದ್ದಾನೆ. ಆದ್ದರಿಂದ ಪ್ರಕೃತಿಯೊಂದಿಗೆ ಬೆರೆತು ಬದುಕನ್ನು ನಡೆಸುವ ಪ್ರವೃತ್ತಿ ಮೈಗೂಡಿಸಿ ಕೊಂಡಾಗ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ ಎಂದರು.

ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಬೇಸಿಗೆ ಶಿಬಿರಗಳು ಅಗತ್ಯ. ಪ್ರಸ್ತುತ ಮಕ್ಕಳು ಗಿಡ, ಮರ, ಪ್ರಾಣಿ, ಪಕ್ಷಿ ಸೇರಿದಂತೆ ಪ್ರಕೃತಿ ಮಡಿಲಿನಲ್ಲಿ ಕಲಿಕೆಗೆ ಮುಂದಾಗಬೇಕಿದೆ. ಜತೆಗೆ ಬೇಸಿಗೆ ರಜೆಯ ದಿನಗಳು ವ್ಯರ್ಥವಾಗದೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಇರುವಂತಹ ಕ್ರಿಯಾತ್ಮಕ ಚಟುವಟಿಕೆ ಬಹು ಮುಖ್ಯವಾಗಿದ್ದು, ತಮ್ಮ ಪ್ರತಿಭೆ ಪ್ರದರ್ಶಿಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದೆ
ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಎ.ಮೋಹನ್ ಮಾತನಾಡಿ, ಮಕ್ಕಳು ವರ್ಷಪೂರ್ತಿ ನಾಲ್ಕು ಗೋಡೆಯ ಮಧ್ಯದಲ್ಲಿ ಪಾಠ ಕೇಳುವುದು ಅನಿವಾರ್ಯವಾದರೂ ಅದೇ ರೀತಿಯಲ್ಲಿ ವರ್ಷಕ್ಕೊಮ್ಮೆ ಇಂತಹ ಪರಿಸರದಲ್ಲಿ ಕೆಲ ದಿನ ಕಾಲ ಕಳೆಯುವ ಮೂಲಕ ಪರಿಸರದ ಕುರಿತು ಮಾಹಿತಿ, ಅನುಭವ ಪಡೆಯ ಬೇಕಾದ್ದು, ಅಷ್ಟೇ ಮುಖ್ಯ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬೇರೆ ಜಿಲ್ಲೆಯವರು ಚಿತ್ರದುರ್ಗ ಬರ ಪೀಡಿತ ಜಿಲ್ಲೆ, ಇಲ್ಲಿ ಏನು ಇಲ್ಲ ಎನ್ನುವುದಾಗಿ ಹೇಳುತ್ತಿದ್ದಾರೆ. ಆದರೆ, ಇಲ್ಲಿ ಎಲ್ಲವೂ ಇದೆ. ಉತ್ತಮ ವಾತಾವರಣ, ಪರಿಸರ ತನ್ನದೇ ಆದ ಕೊಡುಗೆಯನ್ನು ಇಲ್ಲಿನ ಜನತೆಗ ನೀಡಿದೆ. ಅದರ ಪ್ರಯೋಜನ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.

ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟ ದಲ್ಲಿ ಭಾಗವಹಿಸಿದ್ದ ಗ್ರಾಮೀಣ ಪ್ರತಿಭೆ ಬಿ.ಟಿ.ಸುಮಂತ್ ಗಿಡಕ್ಕೆ ನೀರನ್ನು ಎರೆಯುವ ಮೂಲಕ ಶಿಬಿರ ಉದ್ಘಾಟಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ನಿವೇದಿತಾ, ವಕೀಲ ಪಾತ್ಯರಾಜನ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶೈಲಾ, ಕಾರ್ಯದರ್ಶಿ ಶೈಲಜಾ
ಇತರರು ಇದ್ದರು. ಕಾರ್ಯಕ್ರಮ ಸಂಯೋಜಕರಾದ ಬಸವರಾಜ್ ಶಿಬಿರದ ಉದ್ದೇಶವನ್ನು ತಿಳಿಸಿದರು. ರಶ್ಮಿ, ವಂದನಾ ಪ್ರಾರ್ಥಿಸಿದರು. ಅರುಣ್‌ಕುಮಾರ್ ಸ್ವಾಗತಿಸಿದರು. ಏಕನಾಥ್ ಕಾರ್ಯಕ್ರಮ ನಿರೂಪಿಸಿದರು. ಮುರುಗೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.