ADVERTISEMENT

ಪೊಲೀಸರು ದೇಶದ ಆಂತರಿಕೆ ಸೈನಿಕರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:12 IST
Last Updated 22 ಅಕ್ಟೋಬರ್ 2017, 5:12 IST

ಚಿತ್ರದುರ್ಗ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಪೊಲೀಸರ ಸ್ಮರಣೆ, ಅವರನ್ನು ನೆನೆದು ಹೂಗುಚ್ಛಗಳ ಸಮರ್ಪಣೆ, ಪೊಲೀಸ್ ತುಕಡಿಗಳಿಂದ ಗೌರವ, ವಾದ್ಯ ವೃಂದದಿಂದ ಹುತಾತ್ಮರಿಗೆ ನಮನ.

ಇಲ್ಲಿನ ಡಿಎಆರ್ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ಪೊಲೀಸ್ ಹುತಾತ್ಮರ’ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಅವರು ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪಗುಚ್ಛವಿಟ್ಟು ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ದೇಶದ ಭದ್ರತೆಗಾಗಿ ಗಡಿಯಲ್ಲಿ ಸೈನಿಕರು, ಆಂತರಿಕವಾಗಿ ಪೊಲೀಸರು ಸದಾ ಪ್ರಾಣತ್ಯಾಗಕ್ಕೆ ಸಿದ್ಧರಿರುತ್ತಾರೆ ಎಂದರು.

ಪೊಲೀಸ್ ವ್ಯವಸ್ಥೆ  ಇರುವುದರಿಂದಲೇ ಸಮಾಜ ಸುರಕ್ಷಿತವಾಗಿದೆ. ಒಂದೆರಡು ನಿಮಿಷ ಈ ವ್ಯವಸ್ಥೆ ಸ್ಥಗಿತಗೊಂಡರೆ, ಸಮಾಜ ದುರವಸ್ಥೆಗೆ ತಲುಪುತ್ತದೆ. ಟ್ರಾಫಿಕ್ ಪೊಲೀಸರು ಇಲ್ಲದಿದ್ದರೆ, ಸಂಚಾರ ವ್ಯವಸ್ಥೆ ಏನಾಗುತ್ತದೆ ಎಂಬುದನ್ನು ಒಮ್ಮೆ  ಯೋಚಿಸಬೇಕು ಎಂದು ಹೇಳಿದರು.

ADVERTISEMENT

ಯಾವುದೇ ದೊಡ್ಡ ಸಾರ್ವಜನಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ, ಅಲ್ಲಿ ಪೊಲೀಸರು ಇರಲೇಬೇಕು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ. ಜೋಶಿ ಮಾತನಾಡಿ, ‘1959 ಅಕ್ಟೋಬರ್ 21ರಂದು ಭಾರತ–ಚೀನಾ ಗಡಿಭಾಗದಲ್ಲಿ ನಮ್ಮ ದೇಶದ 10 ಮಂದಿ ಯೋಧರು ಚೀನಾ ಸೈನಿಕರಿಂದ ಹತರಾದರು. ಆ ದುರ್ಘಟನೆಯ ನೆನಪಿಗಾಗಿ ಮತ್ತು ನಮ್ಮ ಯೋಧರ ಶೌರ್ಯ, ಸಾಹಸದ ಪ್ರತೀಕದಂತಿದ್ದ ಆ ದಿನವನ್ನು ಸ್ಮರಿಸುವುದಕ್ಕಾಗಿ ಪೊಲೀಸ್ ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈ ವರ್ಷದ ಆಗಸ್ಟ್‌ವರೆಗೆ ದೇಶದಲ್ಲಿ 370 ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ. ಅವರೆಲ್ಲರನ್ನೂ ಹುತಾತ್ಮರ ದಿನದಂದು ಸ್ಮರಿಸುವುದು ನಮ್ಮ ಕರ್ತವ್ಯ’ ಎಂದು ಹೇಳಿ ಹುತಾತ್ಮರಾದ ಪೊಲೀಸರ ಹೆಸರನ್ನು ಓದಿದರು.

ಇದಕ್ಕೂ ಮುನ್ನ ಎಸ್‌ಪಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ, ವಿವಿಧ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪಗುಚ್ಛ ಅರ್ಪಿಸಿದರು. ನಂತರ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.