ADVERTISEMENT

ಬಿಜೆಪಿ ಕೋಮುವಾದಿ ಅಲ್ಲ; ಅಭಿವೃದ್ಧಿ ಪರವಾದಿ

ಬೂತ್‌ ಮಟ್ಟದ ನವಶಕ್ತಿ ಸಮಾವೇಶದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 7:24 IST
Last Updated 28 ಡಿಸೆಂಬರ್ 2017, 7:24 IST

ಚಿತ್ರದುರ್ಗ: ಬಿಜೆಪಿ ಕೋಮುವಾದಿ ಅಲ್ಲ. ವಿಶ್ವದಲ್ಲೇ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಗುರಿ ಹೊಂದಿರುವ ಅಭಿವೃದ್ಧಿ ಪರವಾದಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಬುಧವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬೂತ್‌ ಮಟ್ಟದ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯನ್ನು ಕೋಮುವಾದಿ ಎಂಬುದಾಗಿ ರಾಷ್ಟ್ರದಾದ್ಯಂತ ಕಾಂಗ್ರೆಸ್ಸಿಗರು ಅಪ ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ  ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತು ತೀವ್ರ ಮುಖಭಂಗ ಏಕೆ ಅನುಭವಿಸಿತು ಎಂದು ಪ್ರಶ್ನಿಸಿದರು.

ADVERTISEMENT

ಸ್ವಾತಂತ್ರ್ಯ ಬಂದ ನಂತರದ ಆರವತ್ತುಕ್ಕೂ ಹೆಚ್ಚು ವರ್ಷ ಕಾಂಗ್ರೆಸ್‌ ಅಧಿಕಾರ ನಡೆಸಿದ್ದು, ತನ್ನ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದನ್ನು ಬಿಟ್ಟು ದಿವಾಳಿಯಾಗಿಸಿದೆ ಎಂದು ದೂರಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ಉಳಿಗಾಲವಿಲ್ಲವೆಂದು ಹೇಳುವ ಮೂಲಕ ಅವರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಇದಕ್ಕೆ ಯಾರು ಕಿವಿಗೊಡಬಾರದು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದಾರೆ. ಮದರಸಾಗಳಲ್ಲಿ ಮಕ್ಕಳಿಗೆ ಗಣಕಯಂತ್ರ ಕಲಿಕೆ ಹಾಗೂ ಮಸೀದಿಗಳಲ್ಲಿ ಶೌಚಾಲಯ ನಿರ್ಮಿಸಲು ಆದೇಶ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನೀಡಿದ ಯೋಜನೆಗಳನ್ನೆಲ್ಲಾ ನಮ್ಮದೆಂದು ಕಾಂಗ್ರೆಸ್ ಮುಖಂಡರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಭಿವೃದ್ಧಿ ಮಾಡಿದ ಪಕ್ಷ ಯಾವುದು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲೇ ಮತದಾರರೇ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಭದ್ರಾ ಮೇಲ್ದಂಡೆ, ಕೇಂದ್ರೀಯ ವಿದ್ಯಾಲಯ, ಪ್ರತ್ಯೇಕ ಮಹಿಳಾ ಕಾಲೇಜು ಇವೆಲ್ಲಾ ಬಿಜೆಪಿ ಕೊಡುಗೆ. ಚಿತ್ರದುರ್ಗ ಅಮೃತ್‌ ಸಿಟಿಗೆ ಆಯ್ಕೆಯಾಗಿದ್ದು, ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ₹ 400 ಕೋಟಿ ಮಂಜೂರು ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿ ಬಹುತೇಕ ಕಾಂಗ್ರೆಸ್‌ನ ಮುಖಂಡರಿಗೆ ಇಲ್ಲ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಪಡೆದು ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೂ ಬಂದು ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಪಕ್ಷದ ಎಲ್ಲಾ ಮುಖಂಡರು ಸೇರಿ ಆಹ್ವಾನಿಸಬೇಕು ಎಂದು ಮನವಿ ಮಾಡಿದರು.

ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ, ‘ಬೂತ್ ಮಟ್ಟದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶದ ಪ್ರಧಾನಿಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.

ಬಿಜೆಪಿ ಮುಖಂಡರಾದ ಸಿದ್ದೇಶ್ ಯಾದವ್, ಮುರಳಿ, ವೆಂಕಟಸ್ವಾಮಿ, ಗುರುರಾಜ್, ಮಲ್ಲಿಕಾರ್ಜುನ್, ರತ್ನಮ್ಮ, ಶಿವಣ್ಣಾಚಾರ್, ಗೌರಣ್ಣ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ನರೇಂದ್ರ, ಪಿ.ಲೀಲಾಧರ ಠಾಕೂರ್, ಮೋಹನ್, ರೇಖಾ, ಶ್ರೀನಿವಾಸ್, ನವೀನ್ ಚಾಲುಕ್ಯ, ರೇವಣಸಿದ್ದಪ್ಪ, ಭೀಮರಾಜ್, ಶ್ಯಾಮಲಾ ಶಿವಪ್ರಕಾಶ್ ಇದ್ದರು.

ಕಪ್ಪುಚುಕ್ಕೆ ತೋರಿಸಿದರೆ ರಾಜಕೀಯ ನಿವೃತ್ತಿ:

‘ನನ್ನ ತಂದೆ – ತಾಯಿ ಮಾಡಿರುವ ಆಸ್ತಿಯಿಂದ ವ್ಯವಹಾರ, ವಹಿವಾಟು ನಡೆಸಿ ಬದುಕು ಕಟ್ಟಿಕೊಂಡಿದ್ದೇನೆ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಎಲ್ಲಿಯೂ ಒಂದು ಕಪ್ಪು ಚುಕ್ಕೆಯಿಲ್ಲ. ಯಾವುದಾದರೂ ಇದ್ದು, ಅದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.

***

ಕೋಟಿಗಟ್ಟಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದಿದ್ದಾರೆ. ಹಣ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ.
– ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.