ADVERTISEMENT

ಬೆಳೆ ಹಾನಿ ಪರಿಹಾರ; ವಿಡಿಯೊ ಚಿತ್ರೀಕರಣ

ರೈತ ಮುಖಂಡರು, ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಂಗಯ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2016, 10:14 IST
Last Updated 31 ಮೇ 2016, 10:14 IST

ಚಿತ್ರದುರ್ಗ:  ‘ಮುಂದಿನ ದಿನಗಳಲ್ಲಿ ಬೆಳೆ ಹಾನಿ ನಷ್ಟವನ್ನು ಜಿಪಿಎಸ್ ಮೂಲಕ ವಿಡಿಯೊ ಚಿತ್ರೀಕರಣ ಮಾಡಿಸುವ ಚಿಂತನೆ ಇದ್ದು, ಇದರಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಸಮರ್ಪಕವಾಗಿ ಇನ್‌ಪುಟ್ ಸಬ್ಸಿಡಿ ವಿತರಿಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರೈತ ಸಂಘದ ಮುಖಂಡರು, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ವರ್ಷ ಸಂಭವಿಸಿದ ವ್ಯತ್ಯಾಸಗಳಿಂದಾಗಿ ಶೇ 10 ರಷ್ಟು ರೈತರಿಗೆ ಇನ್‌ಪುಟ್ ಸಬ್ಸಿಡಿ ದೊರೆಯದೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆಯೊಂದಿಗೆ ವಿಡಿಯೊ ಚಿತ್ರೀಕರಣ ಮಾಡಿಸುವ ಚಿಂತನೆ ಇದೆ. ಇದರಿಂದ ತೊಂದರೆ ಗಳನ್ನು ತಪ್ಪಿಸಬಹುದು’ ಎಂದರು.

ಇದಕ್ಕೂ ಮುನ್ನ ರೈತ ಸಂಘದ ಸದಸ್ಯರು, ‘ಈ ಬಾರಿ ಇನ್‌ಪುಟ್ ಸಬ್ಸಿಡಿ ವಿತರಣೆಯಲ್ಲಿ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿ, ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ‘ಕಳೆದ ವರ್ಷದ ಇನ್‌ಪುಟ್ ಸಬ್ಸಿಡಿ ನೀಡಿ ವಿಚಾರ ಬಿಡಿ. ಅದು ಮುಗಿದು ಹೋಗಿದೆ. ಭವಿಷ್ಯದಲ್ಲಿ ಅಂಥ ತೊಂದರೆ ಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ’ ಎಂದು ಹೇಳಿದರು.

ಅಧಿಕಾರಿಗಳಿಗೆ ಎಚ್ಚರಿಕೆ : ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡುವಂತಹ ಕಂಪೆನಿ, ವರ್ತಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಶಿಕ್ಷೆ ವಿಧಿಸಲಾಗುತ್ತದೆ. ಆರಂಭದಲ್ಲೇ ಕರಪತ್ರಗಳನ್ನು ಹೊರಡಿಸಿ ಎಚ್ಚರಿಕೆ ನೀಡುವಂತೆ ಕೃಷಿ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಖಂಡ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ‘2008ರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಅಗತ್ಯವಾಗಿ ಬೇಕಿದ್ದ ಭೂಮಿಯನ್ನು 4(1) ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಕಾಮಗಾರಿಯೂ ಪೂರ್ಣವಾಗಿದೆ. ಆದರೂ ರೈತರಿಗೆ ಪರಿಹಾರ ನೀಡಿಲ್ಲ’ ಎಂದರು.
‘ನಿಮ್ಮ ಅಹವಾಲುಗಳನ್ನು ಮತ್ತು ಈ ಸಭೆಯ ನಡಾವಳಿಗಳನ್ನು ಸರ್ಕಾರಕ್ಕೆ ತಿಳಿಸಿ, ಕೂಡಲೇ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಕೋರಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿದರು.

‘ಬೆಳೆ ವಿಮೆ ಬಂದ ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿ’ ಎಂದು ಜಿಲ್ಲಾಧಿಕಾರಿ ರಂಗಯ್ಯ ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

‘ಪ್ರಸಕ್ತ ಸಾಲಿನಿಂದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋದರೆ, ಪ್ರಕೃತಿ ವಿಕೋಪದಿಂದ ಮೋಟಾರ್ ಪಂಪ್ ಹಾನಿಯಾದರೆ ಮತ್ತು ತೋಟದ ಮನೆಗಳಿಗೆ ಹಾನಿಯಾದರೆ, ಟ್ರ್ಯಾಕ್ಟರ್ ಕಳವು, ಅಥವಾ ಜೀವ ಹಾನಿಯಾದರೂ ವಿಮೆ ಪರಿಹಾರ ನೀಡಲಾಗುತ್ತದೆ. ಎಲ್ಲ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು  ಜಿಲ್ಲಾಧಿಕಾರಿಗಳು ಸೂಚಿಸಿದರು.

‘ಈ ಹಿಂದೆ ಹೋಬಳಿ ಮಟ್ಟದಲ್ಲಿ ಮಳೆ ಹಾನಿಯಾಗಿದ್ದರೆ,  ವಿಮೆ ಪರಿಹಾರ ಬರುತ್ತಿತ್ತು. ಪ್ರಸಕ್ತ ಸಾಲಿನಿಂದ ವೈಯಕ್ತಿಕವಾಗಿ ಬೆಳೆ ಹಾನಿಯಾಗಿದ್ದರೂ ವಿಮೆ ಬರಲಿದೆ. ರೈತರು ತಮ್ಮ ವಂತಿಕೆ ರೂಪದಲ್ಲಿ ವಿಮೆ ಕಂತು ಕಟ್ಟಿದರೆ ಬೆಳೆ ಹಾನಿ ಪರಿಹಾರ ದೊರೆಯಲಿದೆ’ ಎಂದು ಹೇಳಿದರು.

ರೈತ ಮುಖಂಡರಾದ ಭೀಮಾರೆಡ್ಡಿ, ಮುರುಗೇಶ್  ‘ಕಳಪೆ ಬಿತ್ತನೆ ಬೀಜ, ಗೊಬ್ಬರಕ್ಕೆ ಮರಳು, ಮಣ್ಣು ಮಿಕ್ಸ್ ಮಾಡಿ ಮಾರಾಟ ಮಾಡುತ್ತಾರೆ. ಇದನ್ನೆಲ್ಲ ಆರೋಪ ಮಾಡಿದರೆ, ಕಂಪೆನಿಯವರು ಬೇರೆ ಕೃಷಿಕರ ಜತೆ ಹೋಲಿಸಿ, ಸಮರ್ಥನೆ ನೀಡುತ್ತಾರೆ’ ಎಂದು ದೂರಿದರು.

ಕಂಪೆನಿಗಳು ಈ ತಾಳಕ್ಕೆ ಕೃಷಿ ತಜ್ಞರು ಬೆಂಬಲಿಸುತ್ತಾರೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಬರುವವರು ಯಾರು ? ಎಂದು ವಿಜ್ಞಾನಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ರೈತ ಮುಖಂಡರ ಜತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.