ADVERTISEMENT

ಬೇವು –ಬೆಲ್ಲ ಇಲ್ಲದ ಯುಗಾದಿ ಹಬ್ಬ ಆಚರಣೆ

ಚಳ್ಳಕೆರೆಯ ದೇವರಹಳ್ಳಿಯಲ್ಲೊಂದು ವಿಶಿಷ್ಟ ಸಂಪ್ರದಾಯ

ರಾಜಾ ಪರಶುರಾಮ ನಾಯಕ
Published 20 ಮಾರ್ಚ್ 2018, 9:02 IST
Last Updated 20 ಮಾರ್ಚ್ 2018, 9:02 IST
ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿಯಲ್ಲಿರುವ ಇರುವ ದೊಡ್ಲಮಾರಿಕಾಂಬದೇವಿ ದೇವಾಲಯ
ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿಯಲ್ಲಿರುವ ಇರುವ ದೊಡ್ಲಮಾರಿಕಾಂಬದೇವಿ ದೇವಾಲಯ   

ಚಳ್ಳಕೆರೆ: ಸಡಗರ ಸಂಭ್ರಮದಿಂದ ಆಚರಿಸಲಾಗುವ ಯುಗಾದಿಯಲ್ಲಿ ಬೇವು-ಬೆಲ್ಲ ಬಳಸುವುದು ಸಂಪ್ರದಾಯ, ಆದರೆ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಬೇವು-ಬೆಲ್ಲ ಬಳಕೆ ನಿಷಿದ್ಧ...

ತಾಲ್ಲೂಕಿನ ಎನ್.ದೇವರಹಳ್ಳಿಯಲ್ಲಿ ಆಚರಿಸಲಾಗುವ ಯುಗಾದಿ ಹಬ್ಬ  ವಿಶಿಷ್ಟತೆಯಿಂದ ಕೂಡಿದ್ದು, ಚಂದ್ರದರ್ಶನದ ನಂತರ ಮೂರು ದಿನ ನಡೆಯುವ ಆಚರಣೆ ತನ್ನದೇ ಆದ ವಿಶೇಷತೆ ಹೊಂದಿದೆ.

ತಾಲ್ಲೂಕಿನ ಎನ್.ದೇವರಹಳ್ಳಿ ಮತ್ತು ಜಂಬಯ್ಯನಹಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಹಲವು ಸಮುದಾಯಗಳಿವೆ. ಎಲ್ಲಾ ಸಮುದಾಯಗಳು ಒಂದೇ ಸಂಪ್ರದಾಯವನ್ನು ಅನುಸರಿಸುತ್ತಿದ್ದು, ಊರಿನ ಕಟ್ಟುಪಾಡುಗಳಿಗೆ ಒಳಪಟ್ಟು ಆಚರಿಸುವ ರೀತಿ ಎಲ್ಲರನ್ನೂ ಚಕಿತಗೊಳಿಸುವಂತಿದೆ.

ADVERTISEMENT

ಯುಗಾದಿ ಎಂದರೆ ಮುಖ್ಯವಾಗಿ ಬೇವು, ಬೆಲ್ಲ, ಮಾವಿನ ಹಸಿರು ತೋರಣ ಸೇರಿದಂತೆ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುವುದು ಸಾಮಾನ್ಯ. ಆದರೆ ಜಂಬಯ್ಯನಹಟ್ಟಿ ಮತ್ತು ಎನ್.ದೇವರಹಳ್ಳಿ ಗ್ರಾಮಗಳಲ್ಲಿ ಯುಗಾದಿಯನ್ನು ದೊಡ್ಲಮಾರಮ್ಮನ ಜಾತ್ರೆ ಮೂಲಕ ಆಚರಿಸುತ್ತಿರುವುದು ಬುಡಕಟ್ಟು ಸಂಸ್ಕೃತಿಯ ಕುಟುಂಬಗಳ ವಿಭಿನ್ನತೆಗೆ ಸಾಕ್ಷಿಯಾಗಿದೆ.

ವಿಶೇಷ ಪೂಜೆ: ಈ ಆಚರಣೆ ಮಂಗಳವಾರ ಚಂದ್ರನನ್ನು ನೋಡುವ ಮೂಲಕ ಆರಂಭವಾಗುತ್ತದೆ. ಮಂಗಳವಾರ ಬೆಳಿಗ್ಗೆನಿಂದಲೇ ದೊಡ್ಲ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಊರಿನ ಮುಖಂಡರರು, ದೇವಾಲಯದ ಧರ್ಮದರ್ಶಿ ಮತ್ತು ಆಯಗಾರರ ಸಮ್ಮುಖದಲ್ಲಿ ದೇವಿಗೆ ಕುಂಕುಮಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರುತ್ತವೆ. ‌

ಜಾತ್ರೆಗೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ನೆರವೇರಿಸುವ ಪದ್ಧತಿ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಧರ್ಮಾನಾಯ್ಕ.

ಬೇವು-ಬೆಲ್ಲ ನಿಷಿದ್ಧ: ಯುಗಾದಿಯನ್ನು ಚಂದ್ರದರ್ಶನದ ನಂತರ ಆರಂಭಿಸುವ ಗ್ರಾಮಸ್ಥರು ಅಪ್ಪಿತಪ್ಪಿಯೂ ಬೇವು-ಬೆಲ್ಲವನ್ನು ಬಳಸುವುದಿಲ್ಲ. ಸಾಮಾನ್ಯವಾಗಿ ಚಂದ್ರದರ್ಶನದ ಮುನ್ನದಿನ ಇರುವ ಎಣ್ಣೆ ಸ್ನಾನವನ್ನು ಮಾಡುವುದು ಸಂಪ್ರದಾಯ. ಆದರೆ ಇಲ್ಲಿ ಬುಧವಾರ ನಡೆಯುವ ಜಾತ್ರೆಯ ದಿನ ಎಣ್ಣೆಸ್ನಾನ ಮಾಡಿ ಗುಡಿಗೆ ಭೇಟಿ ನೀಡಿ ಹರಕೆ ತೀರಿಸಿಕೊಳ್ಳುವ ಸಂಪ್ರದಾಯವಿದೆ.

ಯುಗಾದಿ ಅಂಗವಾಗಿ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುವ ಗ್ರಾಮಸ್ಥರು ದೇವಿಗೆ ಮಾಂಸಾಹಾರ ನೈವೇದ್ಯವಾಗಿ ಅರ್ಪಿಸಿ ಊರಿನ ಪ್ರತಿ ಮನೆಯಲ್ಲಿ ಬಾಡೂಟ ಮಾಡುವ ಪರಿಪಾಠವನ್ನು ನೆರವೇರಿಸಿಕೊಂಡು ಬಂದಿದ್ದಾರೆ.

ಗ್ರಾಮದ ನಿವಾಸಿ ಕೃಷ್ಣಾನಾಯ್ಕ ಮಾತನಾಡಿ, ‘ಪರಿಶಿಷ್ಟ ಸಮುದಾಯಗಳಲ್ಲಿ ಪ್ರತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಪದ್ಧತಿ ಇದೆ. ಕಾಲ ಕಳೆದಂತೆ ಮೇಲ್ವರ್ಗದ ಸಂಪ್ರದಾಯಗಳನ್ನು ಅನುಸರಿಸಲು ಮುಂದಾದ ಸಾರ್ವಜನಿಕರು ಎಲ್ಲರಂತೆ ಬೇವು,
ಬೆಲ್ಲ ಹಂಚಿ ಮತ್ತು ಚಂದ್ರದರ್ಶನ ಮಾಡುವುದನ್ನು ಅನುಸರಿಸುತ್ತಾರೆ. ಆದರೆ ಕೆಲವು ಗ್ರಾಮಗಳ ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಹಳೆಯ ಪದ್ಧತಿಗಳನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಈ ಬಗ್ಗೆ ಇಂದಿನ ಪೀಳಿಗೆ ಹೆಚ್ಚು ಜಾಗೃತರಾಗಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.