ADVERTISEMENT

ಭದ್ರಾದಿಂದ ಚಿತ್ರದುರ್ಗಕ್ಕೇ ಹೆಚ್ಚು ನೀರು: ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 10:20 IST
Last Updated 25 ಅಕ್ಟೋಬರ್ 2016, 10:20 IST

ಹೊಸದುರ್ಗ: ವಿರೋಧ ಪಕ್ಷದವರು ಟೀಕಿಸುತ್ತಿರುವಂತೆ ಚಿತ್ರದುರ್ಗ ಜಿಲ್ಲೆಗೆ ಸೇರಬೇಕಾದ ಭದ್ರಾ ಮೇಲ್ದಂಡೆ ಯೋಜನೆ ನೀರನ್ನು ತುಮಕೂರಿಗೆ ತೆಗೆದುಕೊಂಡು ಹೋಗುವ ಹುನ್ನಾರ ವನ್ನು ನಾನು ನಡೆಸಿಲ್ಲ. ಈ ಯೋಜನೆಯ ಒಟ್ಟು 29.9 ಟಿಎಂಸಿ ನೀರಿನಲ್ಲಿ 20 ಟಿಎಂಸಿ ನೀರು ಚಿತ್ರದುರ್ಗ
ಜಿಲ್ಲೆಯ ಆರು ತಾಲ್ಲೂಕುಗಳಿಗೆ ಬಳಕೆಯಾಗಲಿದೆ’ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಜಾನಕಲ್ಲು ಸಮೀಪ₹ 72.7 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಯ 2ನೇ ಹಂತದ (3.230 ಕಿ.ಮೀ) ಉದ್ದದ ಸುರಂಗ ಮಾರ್ಗ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕೇವಲ 9.9 ಟಿಎಂಸಿ ನೀರು ತುಮಕೂರು ಜಿಲ್ಲೆಗೆ ಹರಿಯುತ್ತದೆ. ‘1976ರ ಸುಪ್ರೀಂಕೋರ್ಟ್‌ ಆದೇಶದಂತೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು 2006–07ರಲ್ಲಿ ರಾಜ್ಯ ದಲ್ಲಿ ಆಡಳಿತ ನಡೆಸಿದ ಸರ್ಕಾರ ಸ್ಥಗಿತ ಗೊಳಿಸಬೇಕು ಎಂದು ಚಿಂತನೆ ನಡೆಸಿತ್ತು. ಆದರೆ, ಇಂತಹ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಸುರಂಗ ಮಾರ್ಗದ ಸಮೀಪ (ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಅತ್ತಿಮೊಗ್ಗೆ) ಭೂಕುಸಿತ ಆಗಿರುವುದು ಕಳಪೆ ಕಾಮಗಾರಿ ಯಿಂದ ಅಲ್ಲ.

ಅಲ್ಲಿ ಉಸುಕು ಮಣ್ಣು ಸಿಕ್ಕಿರುವುದರಿಂದ ಅವಘಡ ಸಂಭವಿಸಿದೆ ಅಷ್ಟೆ. ದೊಡ್ಡ ಕಾಮಗಾರಿ ನಡೆಯುವಾಗ ಇಂತಹ ಘಟನೆಗಳು  ಸಾಮಾನ್ಯ. ಜಾನಕಲ್ಲು ಬಳಿಯ ಸುರಂಗ ಮಾರ್ಗದ ಜಾಗ ಗಟ್ಟಿಯಾಗಿದ್ದು ಯಾವ ಅವಘಡ ಸಂಭವಿಸುವುದಿಲ್ಲ. ಇದು ರಾಷ್ಟ್ರೀಯ ನೀರಾವರಿ ಯೋಜನೆ ಆಗಿದ್ದು, ಕೇಂದ್ರದ ಅನುದಾನವೂ  ಬರಬೇಕಾಗಿದೆ ಎಂದರು.

ಮೂರು ವರ್ಷದಲ್ಲಿ ಯೋಜನೆಗೆ₹ 1,580 ಕೋಟಿ ವೆಚ್ಚವಾಗಿದೆ. ಲಕ್ಷಾಂತರ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ  ಯೋಜನೆಗೆ ಒಟ್ಟು ₹ 12,340 ಕೋಟಿ ವೆಚ್ಚದ ಆಡಳಿತಾತ್ಮಕ ಮಂಜೂರಾತಿ ದೊರಕಿದೆ. ಕಾಮಗಾರಿಗೆ ಹಣದ ತೊಂದರೆ ಇಲ್ಲ. ತೊಂದರೆಯಾದರೆ ಸಾಲ ಮಾಡಿಯಾದರೂ ಎರಡು ವರ್ಷಗಳ ಒಳಗೆ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್‌, ಟಿ.ರಘುಮೂರ್ತಿ, ಜಯಮ್ಮ ಬಾಲರಾಜು, ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜು, ತಾ.ಪಂ. ಅಧ್ಯಕ್ಷೆ ಶಾಂತಲಾ ಗಿರೀಶ್‌, ನೀರಾವರಿ ಹೋರಾಟಗಾರ ಜಯಣ್ಣ ಮತ್ತಿತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.