ADVERTISEMENT

ಭದ್ರಾ ಮೇಲ್ದಂಡೆಗೆ ಹಣದ ಕೊರತೆಯಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:58 IST
Last Updated 16 ಮಾರ್ಚ್ 2018, 6:58 IST
ಹೊಸದುರ್ಗದಲ್ಲಿ ಗುರುವಾರ ನಡೆದ ₹ 400 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು
ಹೊಸದುರ್ಗದಲ್ಲಿ ಗುರುವಾರ ನಡೆದ ₹ 400 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಗೆ ಹಣದ ಕೊರತೆಯಿಲ್ಲ. ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹೊಸದುರ್ಗದಲ್ಲಿ ಗುರುವಾರ ನಡೆದ ₹ 400 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಈ ಯೋಜನೆಗೆ ನಮ್ಮ ಸರ್ಕಾರ ಐದು ವರ್ಷಗಳಲ್ಲಿ ₹ 1800 ಕೋಟಿ ವೆಚ್ಚ ಮಾಡಿದೆ. ಸುರಂಗ ಮಾರ್ಗದಲ್ಲಿ ಉಂಟಾದ ತೊಂದರೆಗಳಿಂದ ಕೆಲಸ ವಿಳಂಬವಾಗಿದೆ. ಇಲ್ಲದಿದ್ದರೆ ಈ ಹೊತ್ತಿಗೆ ಕಾಮಗಾರಿ ಮುಗಿದು, ಜಿಲ್ಲೆಗೆ ನೀರು ಹರಿಯಬೇಕಿತ್ತು’ ಎಂದು ಕಾಮಗಾರಿ ವಿಳಂಬಕ್ಕೆ ಕಾರಣ ನೀಡಿದರು.

’ನಮ್ಮ ಅವಧಿಯಲ್ಲಿ ₹ 44,552 ಕೋಟಿಯನ್ನು ನೀರಾವರಿಗೆ ಈಗಾಗಲೇ ಖರ್ಚು ಮಾಡಿದ್ದೇವೆ. ಜನರಿಗೆ ಕೊಟ್ಟ ಮಾತಿನಂತೆ ಇನ್ನೆರಡು ತಿಂಗಳಲ್ಲಿ ಒಟ್ಟು ₹ 50 ಸಾವಿರ ಕೋಟಿ ವೆಚ್ಚದ ಗುರಿ ತಲುಪುತ್ತೇವೆ. ಆದರೆ, ಈ ಹಿಂದೆ ಬಿಜೆಪಿಯ ಮೂರು ಮುಖ್ಯಮಂತ್ರಿಗಳೂ ಸೇರಿ ನೀರಾವರಿಗೆ ₹ 18 ಸಾವಿರ ಕೋಟಿ. ಇಷ್ಟಾದರೂ ಒಬ್ಬರು ‘ನಾವು ರೈತರು ಮಕ್ಕಳು’ ಎನ್ನುತ್ತಾರೆ, ಮತ್ತೊಬ್ಬರು ‘ನಾವು ಮಣ್ಣಿನ ಮಕ್ಕಳು’ ಎನ್ನುತ್ತಾರೆ. ಹಾಗಾದರೆ ನಾವು, ನೀವೆಲ್ಲ ಯಾರ ಮಕ್ಕಳಪ್ಪಾ... ನಾವೂ ರೈತರ ಮಕ್ಕಳೇ’ ಎನ್ನುತ್ತಾ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ADVERTISEMENT

ಭಾಷಣದ ಆರಂಭದಲ್ಲೇ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕಾರ್ಯ ಶ್ಲಾಘಿಸಿದ ಸಿದ್ದರಾಮಯ್ಯ, ‘ಗೋವಿಂದಪ್ಪ, ಈ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ₹ 4,200 ಕೋಟಿ ಅನುದಾನ ತಂದಿದ್ದಾರೆ. ಇಷ್ಟು ಹಣವನ್ನು ನನ್ನ ಕ್ಷೇತ್ರಕ್ಕೂ ತರಲಾಗಿಲ್ಲ. ಒಬ್ಬ ಶಾಸಕ ಕ್ಷೇತ್ರದ ಬಗ್ಗೆ ಬದ್ಧತೆ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಪ್ರಯತ್ನ ಮಾಡಿದರೆ ಈ ರೀತಿ ಅನುದಾನ ತರಲು ಸಾಧ್ಯ’ ಎಂದರು.

‘ಅಭಿವೃದ್ಧಿ ಪರ ಚಿಂತಿಸುವ ಶಾಸಕರಲ್ಲಿ ಗೋವಿಂದಪ್ಪ ಮೊದಲ ಸಾಲಲ್ಲಿದ್ದಾರೆ. ಈ ಭಾಗದ ಜನ ಕೆಲಸ ಮಾಡುವ ಶಾಸಕನನ್ನು ಆಯ್ಕೆ ಮಾಡಿದ್ದಾರೆ. ಮುಂದೆಯೂ ಗೋವಿಂದಪ್ಪನನ್ನೇ ಆಯ್ಕೆ ಮಾಡಿ’ ಎನ್ನುತ್ತಾ ಸಿದ್ದರಾಮಯ್ಯ ಚುನಾವಣಾ ಪ್ರಚಾರದತ್ತ ಮಾತು ಹೊರಳಿಸಿದರು.‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಗೋವಿಂದಪ್ಪ ಮುಂದಿದ್ದಾರೆ. ಅವರ ಒತ್ತಾಸೆಯಿಂದಲೇ ತಾಲ್ಲೂಕಿನ 360 ಹಳ್ಳಿಗಳಿಗೆ ₹ 350 ಕೋಟಿ ಯೋಜನೆಯ ಕುಡಿಯುವ ನೀರಿನ ಯೋಜನೆ ಮಂಜೂರಾಯಿತು’ ಎಂದು ನೆನಪಿಸಿಕೊಂಡರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ,‘ಬಿಜೆಪಿಯವರು ನಮ್ಮ ಸರ್ಕಾರವನ್ನು ಭ್ರಷ್ಟ ಎನ್ನುತ್ತಾರೆ. ಸ್ಥಿರ ಸರ್ಕಾರಕ್ಕಾಗಿ ತಮ್ಮನ್ನು ಬೆಂಬಲಿಸಿ ಎನ್ನುತ್ತಾರೆ. ಇಡೀ ಐದು ವರ್ಷಗಳಲ್ಲಿ ನಮ್ಮ ವಿರುದ್ಧ ಒಂದೇ ಒಂದು ಹಗರಣ ಕೇಳಿಬಂದಿಲ್ಲ. ಆದರೆ, ಯಡಿಯೂರಪ್ಪ ಸೇರಿದಂತೆ ಅವರ ಪಕ್ಷದಲ್ಲಿ ಅನೇಕರು ಜೈಲಿಗೆ ಹೋಗಿಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಒಪ್ಪಿಕೊಂಡರೆ ಮತ್ತೊಮ್ಮೆ ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಬರುತ್ತದೆ. ಸ್ಥಿರ ಸರ್ಕಾರ ಬೇಕೆಂದರೆ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಮುಖ್ಯಮಂತ್ರಿ ಭಾಷಣಕ್ಕೆ‘ಜೋಷ್’ ಪ್ರತಿಕ್ರಿಯೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಸಾರ್ವಜನಿಕರು ಜೋಷ್ ನಲ್ಲಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳನ್ನು ಪಟ್ಟಿ ಮಾಡುತ್ತಾ ‘ಯಾರು ಕೊಟ್ಟರು ಇದನ್ನೆಲ್ಲ’ ಎಂದು ಹೇಳುತ್ತಿದ್ದಾಗ ಜನರು ಪ್ರತಿಕ್ರಿಯಿಸುತ್ತಿದ್ದರು. ಗೋವಿಂದಪ್ಪರನ್ನು ಹೊಗಳಿದಾಗ ಶಿಳ್ಳೆ ಹೊಡೆದರು, ಮಧ್ಯೆ ಮಧ್ಯೆ ಜಯಕಾರ ಕೂಗಿದರು. ‘ಇದು ಪಕ್ಷದ ಕಾರ್ಯಕ್ರವಲ್ಲ, ಸುಮ್ನಿರ‍್ರಪ್ಪ’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೂ ಕೂಗಾಟ, ಜಯಕಾರ ಮುಂದುವರಿದಿತ್ತು.

ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಾದ ಅಭಿವೃದ್ಧಿ ಕಾರ್ಯಗಳ ಪುಸ್ತಿಕೆಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇದೇ ವೇದಿಕೆಯಲ್ಲಿ ಆದಿಜಾಂಬವ ನಿಗಮ ಸ್ಥಾಪನೆ ಮಾಡಿದ್ದಕ್ಕಾಗಿ, ಆದಿಜಾಂಬವ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.