ADVERTISEMENT

ಭಿನ್ನಾಭಿಪ್ರಾಯ ಬಿಡಿ, ರಾಜ್ಯವನ್ನು ಕಾಂಗ್ರೆಸ್‌ಮುಕ್ತ ಮಾಡಿ

ಹಿರಿಯೂರು: ಕಾರ್ಯಕರ್ತರಿಗೆ ಉತ್ತರ ಪ್ರದೇಶದ ಸಂಸದ ಶರದ್ ತ್ರಿಪಾಠಿ ಕರೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:54 IST
Last Updated 26 ಏಪ್ರಿಲ್ 2018, 9:54 IST

ಹಿರಿಯೂರು: ‘ಮುಖಂಡರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅವನ್ನೆಲ್ಲಾ ಬಿಡಿ, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿ’ ಎಂದು ಉತ್ತರ ಪ್ರದೇಶದ ಸಂಸದ ಶರದ್ ತ್ರಿಪಾಠಿ ಕರೆ ನೀಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಚುನಾವಣೆ ಸಂಘಟನೆ ಕುರಿತು ಅವರು ಮಾಹಿತಿ ನೀಡಿದರು.

‘ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾರಣಕ್ಕೆ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಪೊಲೀಸ್, ಅಬಕಾರಿ ಮೊದಲಾದ ಇಲಾಖೆಗಳ ಅಧಿಕಾರಿಗಳನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ನಮ್ಮ ಪಕ್ಷದ ಮತದಾರರು ಇತರ ಪಕ್ಷಗಳತ್ತ ವಾಲದಂತೆ ನೋಡಿಕೊಳ್ಳಿ’ ಎಂದು ತಿಳಿಸಿದರು.

ADVERTISEMENT

‘ಮತದಾರರು ಬೇರೆ ಪಕ್ಷಗಳ ಆಮಿಷಗಳಿಗೆ ಒಳಗಾಗದಂತೆ ಎಚ್ಚರ ವಹಿಸಬೇಕು. ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ನೀವು ಜನರಲ್ಲಿ ಅರಿವು ಮೂಡಿಸಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಹ ಎಲ್ಲ ಅವಕಾಶಗಳಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಭಯ: ಐದಾರು ತಿಂಗಳ ಹಿಂದೆ ನಡೆದ ಚುನಾವಣಾ ಸಮೀಕ್ಷೆಗಳನ್ನು ನೋಡಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಾಳಯದಲ್ಲಿ ಪ್ರಸ್ತುತ ಸೂತಕದ ಛಾಯೆ ಕಾಣುತ್ತಿದೆ. ದಿನದಿಂದ ದಿನಕ್ಕೆ ಬಿಜೆಪಿ ಚೇತರಿಸಿಕೊಳ್ಳುತ್ತಿರುವುದು ಎಲ್ಲಾ ಸಮೀಕ್ಷೆಗಳಲ್ಲೂ ಎದ್ದು ಕಾಣುತ್ತಿದೆ. ಸ್ವತಃ ಸಿ.ಎಂ.ಗೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಅವರು ಮತ್ತೊಂದು ಕಡೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದನ್ನು ತೇಲಿಸಲು ರಾಹುಲ್ ಅವರಿಂದ ಆಗದು ಎಂದು ಹೇಳಿದರು.

‘ಹಿರಿಯೂರು ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಾರಿ ಬಿಜೆಪಿಗೆ ಪೂರಕ ವಾತಾವರಣವಿದೆ. ರಾಜ್ಯ ಸರ್ಕಾರದ ಧರ್ಮಗಳನ್ನು ಒಡೆದು ಆಳುವ ನೀತಿ, ಮಿತಿಮೀರಿದ ಭ್ರಷ್ಟಾಚಾರ ಅದಕ್ಕೆ ಮುಳುವಾಗಲಿದೆ. ನಮ್ಮಲ್ಲಿ ಕೆಲವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಆದರೆ, ಯಾವುದೂ ಸಾಬೀತಾಗಿಲ್ಲ. ಭ್ರಷ್ಟಾಚಾರದ ಆರೋಪ ಇರುವಂತಹ ಮುಖಂಡರು ಕಾಂಗ್ರೆಸ್‌ನಲ್ಲಿ ನೂರಾರು ಸಂಖ್ಯೆಯಲ್ಲಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಒಬಿಸಿ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷ ಕೆ.ಎಸ್. ನವೀನ್, ದ್ಯಾಮಣ್ಣ, ಬಬ್ಬೂರು ಸುರೇಶ್, ರಾಮಯ್ಯ, ನಗರಸಭೆ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು. ವಕೀಲ ಕೆ. ರಂಗಸ್ವಾಮಿ ಹಾಗೂ ಹತ್ತಾರು ಮುಖಂಡರು ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.