ADVERTISEMENT

‘ಮನುಷ್ಯನಿಗೆ ಪರಿಸರ ಅನಿವಾರ್ಯ’

ವಿಶ್ವ ಭೂಮಿ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:10 IST
Last Updated 23 ಏಪ್ರಿಲ್ 2018, 8:10 IST

ಚಿತ್ರದುರ್ಗ: ‘ಪರಿಸರದ ಅನಿವಾರ್ಯತೆ ಮನುಷ್ಯನಿಗಿದೆ. ಇದಿಲ್ಲದಿದ್ದರೆ,ಯಾವ ಜೀವಿಗಳೂ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಇದರ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಸಲಹೆ ನೀಡಿದರು.

ಇಲ್ಲಿನ ವಕೀಲರ ಭವನದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರದ ಮಹತ್ವ ಅರಿಯದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇದರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾನೆ. ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಈ ಕುರಿತು ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ವಿನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಕೆಲವೆಡೆ ಮರಗಳನ್ನು ಕಡಿಯಲಾಗುತ್ತಿದೆ. ಸಕಾಲಕ್ಕೆ ಮಳೆಯಾಗಬೇಕಾದರೆ, ಮರಗಿಡಗಳಿರಬೇಕು. ಪರಿಸರ ಸಂರಕ್ಷಿಸದಿದ್ದರೆ, ಏರುಪೇರು ಉಂಟಾಗಿ ಭೂಕಂಪ, ಸುನಾಮಿ, ಚಂಡಮಾರುತದಂತಹ ಪ್ರಕೃತಿ ವೈಪರೀತ್ಯಗಳು ನಡೆಯುತ್ತವೆ. ಆದ್ದರಿಂದ ಪರ್ಯಾಯವಾಗಿ ಹಲವು ಗಿಡಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

‘ನಾವು ಬಳಸುವ ಭೂಮಿಯಲ್ಲಿ ಕನಿಷ್ಠ ಶೇ 10ರಷ್ಟು ಭೂಮಿಯನ್ನು ಅರಣ್ಯ ಬೆಳೆಸಲು ಕಾಯ್ದಿರಿಸಬೇಕು. ತಪ್ಪಿದಲ್ಲಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತದೆ. ಅಲ್ಲದೇ ಪ್ರಾಣಿ ಸಂಕುಲಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಜನತೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರ ಸ್ನೇಹಿ ಕೈಚೀಲಗಳನ್ನು ಬಳಸಬೇಕು’ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಬಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಬಸವರಾಜ ಎಸ್.ಚೇಗರೆಡ್ಡಿ, ಡಿ.ವೀರಣ್ಣ, ಎಚ್.ಎಂ.ವಿರುಪಾಕ್ಷಯ್ಯ, ಸಂಘದ ಉಪಾಧ್ಯಕ್ಷ ಕೆ. ವೀರಭದ್ರಪ್ಪ ಇದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ ಸ್ವಾಗತಿಸಿದರು. ನ್ಯಾಯಾಂಗ ಇಲಾಖೆ ವ್ಯವಸ್ಥಾಪಕ ದೋನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.