ADVERTISEMENT

ಮೈನವಿರೇಳಿಸಿದ ಕರಿಯಮ್ಮದೇವಿ ಗಾವು ಸಿಗಿತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2011, 6:00 IST
Last Updated 25 ಏಪ್ರಿಲ್ 2011, 6:00 IST
ಮೈನವಿರೇಳಿಸಿದ ಕರಿಯಮ್ಮದೇವಿ ಗಾವು ಸಿಗಿತ
ಮೈನವಿರೇಳಿಸಿದ ಕರಿಯಮ್ಮದೇವಿ ಗಾವು ಸಿಗಿತ   

ಹೊಳಲ್ಕೆರೆ: ತಾಲ್ಲೂಕಿನ ನಗರಘಟ್ಟದಲ್ಲಿ ಭಾನುವಾರ ಗ್ರಾಮದೇವತೆ ಕರಿಯಮ್ಮದೇವಿಯ ವಿಶಿಷ್ಟ ‘ಗಾವು ಸಿಗಿಯುವ ಆಚರಣೆ’ ನಡೆಯಿತು.

ದೇವಿಗೆ ಹೊಳೆಪೂಜೆ ಸಲ್ಲಿಸಿದ ನಂತರ ಪೂಜಾರಿಯೊಂದಿಗೆ ಭಕ್ತರು ದೇವಾಲಯದ ಆವರಣಕ್ಕೆ ಬರುತ್ತಾರೆ. ಗಾವು ಸಿಗಿಯುವ ಪೂಜಾರಿ ಮುಖಕ್ಕೆ ಅರಿಶಿಣ, ಕುಂಕುಮ ಬಳಿದುಕೊಂಡಿರುತ್ತಾನೆ. ಉದ್ದಕೂದಲಿನ ಪೂಜಾರಿ ತನ್ನ ವಿಶಿಷ್ಟ ವೇಷಭೂಷಣಗಳಿಂದ ಭಯಂಕರವಾಗಿ ಕಾಣುತ್ತಾನೆ.

ಗಾವು ಸಿಗಿಯುವ ಸ್ಥಳದಲ್ಲಿ ಪೂಜಾರಿ ಕಾಲಿಗೆ ವಿಶೇಷ ಕಡಗ ತೊಟ್ಟು, ಚಾಟಿಯಿಂದ ಮೈಗೆ ಹೊಡೆದುಕೊಳ್ಳುತ್ತ ದೇವರ ಅಪ್ಪಣೆ ಕೇಳುತ್ತಾನೆ. ದೇವರು ಅಪ್ಪಣೆ ಕೊಟ್ಟ ಮೇಲೆ ಗ್ರಾಮಸ್ಥರ ಒಪ್ಪಿಗೆಯನ್ನೂ ಪಡೆಯುತ್ತಾನೆ. ನಂತರ ಅಲ್ಲಿದ್ದವರಿಗೆ ‘ಗಾವುಗುಂಡಿ’ ತೆಗೆಯಲು ಹೇಳುತ್ತಾನೆ. ಗುಂಡಿಗೆ ಸಗಣಿ ಬಳಿದು, ಅರಿಶಿಣ, ಕುಂಕುಮಗಳಲ್ಲಿ ಚಿತ್ತಾರ ಬಿಡಿಸುತ್ತಾನೆ.

ಗುಂಡಿಯ ಸುತ್ತ ಬಾಳೆಎಲೆ ಹಾಸಿ, ಅನ್ನದ ಉಂಡೆ, ಚಿಗಣಿ, ತಂಬಿಟ್ಟು, ಎಲೆ, ಅಡಿಕೆ, ಬಾಳೆಹಣ್ಣು ಇಟ್ಟು ಪೂಜಿಸುತ್ತಾನೆ. ಆಗ ಮೇಕೆಯೊಂದನ್ನು ಅಲ್ಲಿಗೆ ತರಲಾಗುತ್ತದೆ. ಅದಕ್ಕೂ ಪೂಜೆ ಸಲ್ಲಿಸಿ, ಮೇಕೆಯನ್ನು ಹೊತ್ತು ದೇವಾಲಯ ಸುತ್ತುತ್ತಾನೆ. ಗಾವು ಗುಂಡಿಯ ಮುಂದೆ ಮೇಕೆಯನ್ನು ಮಲಗಿಸಿ, ಅದರ ಮೇಲೆ ಚಾಟಿ ಮತ್ತು ಕಡಗ ಇಡುತ್ತಾನೆ. ಆಗ ಅಲ್ಲಿದ್ದ ಭಕ್ತರೆಲ್ಲ ಪೂಜಾರಿಗೆ ಕಾಣಿಕೆ ಕೊಡುತ್ತಾರೆ.

ಪೂಜಾರಿ ಮತ್ತೊಮ್ಮೆ ದೇವರನ್ನು ನೆನೆದು, ಮೇಕೆಯ ಬಾಯಿಯನ್ನು ತನ್ನ ಹಲ್ಲುಗಳಿಂದ ಸೀಳುತ್ತಾನೆ.ಸಿಗಿದ ಮಾಂಸದ ತುಂಡುಗಳನ್ನು ಬಟ್ಟೆಯಲ್ಲಿ ಕಟ್ಟಿ ಗುಂಡಿಯಲ್ಲಿ ಮುಚ್ಚುತ್ತಾರೆ. ನಂತರ ಅನ್ನದ ಉಂಡೆ ತಿನ್ನುತ್ತಾನೆ. ಆಗ ಪೂಜಾರಿಗೆ ಗಡಿಗೆಯಲ್ಲಿ ಮೊಸರು ತಂದು ಕೊಡುತ್ತಾರೆ. ಮೊಸರನ್ನು ಕುಡಿದ ಪೂಜಾರಿ ಅದರಿಂದಲೇ ಕೈತೊಳೆಯುತ್ತಾನೆ. ನಂತರ ಭಕ್ತರೂ ಮೊಸರು ಕುಡಿಯುತ್ತಾರೆ. ಈ ಎಲ್ಲಾ ದೃಶ್ಯಗಳು ನೆರೆದಿದ್ದವರನ್ನು ರೋಮಾಂಚನಗೊಳಿಸುತ್ತವೆ.

‘ಆಚರಣೆ ಮುಗಿದ ನಂತರ ದೇವಾಲಯದ ಬಾಗಿಲು ಹಾಕಲಾಗುತ್ತದೆ. ಮುಂದಿನ 9 ದಿನಗಳವರೆಗೂ ಬಾಗಿಲು ತೆಗೆಯುವುದಿಲ್ಲ. ಗ್ರಾಮಕ್ಕೆ ಯಾವುದೇ ಕಂಟಕಗಳು ಬಾರದಿರಲಿ ಎಂದು ತಲೆತಲಾಂತರದಿಂದ ಈ ಆಚರಣೆ ನಡೆಸಿಕೊಂಡು ಬಂದಿದ್ದೇವೆ’ ಎಂದು ಹಿರಿಯರು ಹೇಳುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.