ADVERTISEMENT

ಮೊಳಕಾಲ್ಮುರು: ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ

₹ 9 ಕೋಟಿ ವೆಚ್ಚ, ಹಾನಗಲ್‌ ರಸ್ತೆಯಲ್ಲಿ ನಿರ್ಮಾಣ, ಭೂಮಿಪೂಜೆ ಮಾಹಿತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:07 IST
Last Updated 23 ಮಾರ್ಚ್ 2018, 10:07 IST

ಮೊಳಕಾಲ್ಮುರು: ಅನೇಕ ಅಡೆತಡೆ ಮಧ್ಯೆಯೂ ಕೊನೆಗೂ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತು ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿದರು.

ಹಾನಗಲ್‌ ರಸ್ತೆಯಲ್ಲಿ ನೂತನವಾಗಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಫನೆ ಮಾಡಿ ಅವರು ಮಾತನಾಡಿದರು.

‘ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್‌ ಹಾಗೂ ಕಾಗೋಡು ತಿಮ್ಮ‍ಪ್ಪ ಬಳಿ ಹಲವು ಬಾರಿ ಮಂಜೂರಾತಿಗೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಜನಪ್ರತಿಯೊಬ್ಬರ ಪ್ರಬಲ ಒತ್ತಡ ಕಾರಣ ಎಂದು ಕಾಣಸಿಕ್ಕಿತು. ಕೊನೆಗೆ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಭಾಧ್ಯಕ್ಷರು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಿಧಿ ಇಲ್ಲದೇ ಮಂಜೂರಾತಿ ನೀಡಲಾಯಿತು’ ಎಂದು ಹೇಳಿದರು.

ADVERTISEMENT

‘ನಾನು ಇಲ್ಲಿ ಶಾಸಕನಾಗುವ ಮೊದಲು ಕ್ಷೇತ್ರ ಹಿಂದುಳಿದ ಕ್ಷೇತ್ರ ಎಂದು ಹಣೆಪಟ್ಟಿ ಕಟ್ಟಿಕೊಂಡಿತ್ತು. ನನ್ನ ಅವಧಿಯಲ್ಲಿ ಉತ್ತಮ ಶಾಲಾ ಕಟ್ಟಡ ನಿರ್ಮಾಣ, ರಸ್ತೆ– ಚರಂಡಿ ನಿರ್ಮಾಣ, ಮೂಲ ಸೌಕರ್ಯಗಳನ್ನು ನೀಡುವ ಮೂಲಕ ಅಭಿವೃದ್ಧಿಪಡಿಸಿದ್ದೇನೆ. ಇನ್ನೂ ಸಾಕಷ್ಟು ಕೆಲಸವಾಗಬೇಕಿದ್ದು, ಮುಂದೆ ಅಧಿಕಾರ ನೀಡುವ ಹೊಣೆ ಜನರ ಮೇಲಿದೆ’ ಎಂದು ಹೇಳಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿ, ‘ಮತದಾರರ ಸೇವೆ ಮಾಡುವ ಇಚ್ಛಾಶಕ್ತಿ ಕೊರತೆ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಮೊಳಕಾಲ್ಮುರು ಕ್ಷೇತ್ರ ಹಿಂದುಳಿಯಲು ಜನರೇ ನೇರ ಕಾರಣವಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾಪಂಚಾಯ್ತಿ ಸದಸ್ಯ ಮುಂಡ್ರಗಿ ನಾಗರಾಜ್ ಮಾತನಾಡಿ, ಮೊಳಕಾಲ್ಮುರು ಕಳೆದ 20 ವರ್ಷದಲ್ಲಿ ಶೇ 25 ರಷ್ಟು ಮಾತ್ರ ಅಭಿವೃದ್ಧಿ ಕಂಡಿದೆ. ಅತ್ಯಂತ ಹಿಂದುಳಿದ ತಾಲ್ಲೂಕು ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇನ್ನಾದರೂ ಅಭಿವೃದ್ಧಿ ಕಾಣಬೇಕು ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬಸಮ್ಮ, ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯರಾದ ಮಾರನಾಯಕ, ಪಟೇಲ್‌ ಪಾಪನಾಯಕ, ಪಟ್ಟಣ ಪಂಚಾಯ್ತಿ ಸದಸ್ಯರಾದ ಮಾಬೂಸಾಬ್‌, ರಾಜಶೇಖರ್, ಶಿವಮೂರ್ತಿ, ಮುಖ್ಯಾಧಿಕಾರಿ ರುಕ್ಷ್ಮಿಣಿ, ಪಾರ್ಥಸಾರಥಿ ಇದ್ದರು.
ಮುಜಾಮಿಲ್‌ ಸ್ವಾಗತಿಸಿದರು, ಲೋಕೋಪಯೋಗಿ ಅಭಿಯಂತರ ಬಸವನಗೌಡ ಸ್ವಾಗತಿಸಿದರು.

ಅವ್ಯವಸ್ಥೆ: ಹಲವು ವರ್ಷ ಬೇಡಿಕೆ ನಂತರ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಶಂಕುಸ್ಥಾಪನೆ ಬಗ್ಗೆ ಜನರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ಇರಲಿಲ್ಲ. ಪರಿಣಾಮ 25–30 ಜನರು ಮಾತ್ರ ಭಾಗವಹಿಸಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು. ಹಾಕಿದ್ದು ಸ್ವಲ್ಪ ಕುರ್ಚಿಗಳು ಸಹ ಬಿಕೋ ಎನ್ನುತ್ತಿದ್ದವು. ಇದನ್ನು ಭಾಷಣದಲ್ಲಿ ಮುಂಡ್ರಗಿ ನಾಗರಾಜ್‌ ಪ್ರಸ್ತಾಪ ಮಾಡಿದರು.

ಕಾರ್ಯಕ್ರಮ ಹೊಣೆ ಲೋಕೋಪಯೋಗಿ ಹಾಗೂ ಬಂದರು ಅಭಿವೃದ್ಧಿ ಇಲಾಖೆಗೆ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.