ADVERTISEMENT

ಯಾರಿಗೂ ಬೇಡವಾದ ₹ 10ರ ನಾಣ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 6:54 IST
Last Updated 4 ಏಪ್ರಿಲ್ 2017, 6:54 IST
ಯಾರಿಗೂ ಬೇಡವಾದ ₹ 10ರ ನಾಣ್ಯ
ಯಾರಿಗೂ ಬೇಡವಾದ ₹ 10ರ ನಾಣ್ಯ   

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ₹ 10 ಮುಖಬೆಲೆ ನಾಣ್ಯಗಳ ಚಲಾವಣೆ ಪೂರ್ಣವಾಗಿ ಸ್ಥಗಿತವಾಗಿದ್ದು, ನಾಣ್ಯಗಳನ್ನು ಹೊಂದಿರುವ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ನವಂಬರ್‌ವರೆಗೆ ಯಾವುದೇ ಅಡ್ಡಿ ಇಲ್ಲದೇ ₹ 10 ಬೆಲೆ ನಾಣ್ಯಗಳು ಚಲಾವಣೆಯಾಗುತ್ತಿದ್ದವು.

1,000 ಹಾಗೂ ₹ 500 ಮುಖಬೆಲೆ ನೋಟುಗಳು ಅಮಾನ್ಯಗೊಂಡ 10–15 ದಿನಗಳ ನಂತರ ವದಂತಿ ರೂಪದಲ್ಲಿದ್ದ ನಾಣ್ಯ ನಿರಾಕರಣೆ ಆರಂಭವಾಗಿ ಈಗ ವಿಕೋಪಕ್ಕೆ ಹೋಗಿದ್ದು ಬಹುತೇಕ ಎಲ್ಲಿಯೂ ಚಲಾವಣೆಯಾಗದ ಸ್ಥಿತಿ ತಲುಪಿದೆ.

ಇತ್ತೀಚೆಗೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು, ಹೋಟೆಲ್‌ಗಳು, ವಿದ್ಯುತ್‌ ಬಿಲ್‌ ಪಡೆಯುವ ಕೌಂಟರ್‌ಗಳು, ಸಂತೆಗಳು, ಫೈನಾನ್ಸ್‌ಗಳು, ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಎಲ್ಲಿಯೂ ₹ 10ರ ನಾಣ್ಯ ತೆಗೆದುಕೊಳ್ಳುತ್ತಿಲ್ಲ ಎಂದು ವೆಂಕಟೇಶ್‌, ಸಾಗರ್, ಗುರುಸ್ವಾಮಿ ದೂರಿದರು.

ADVERTISEMENT

ಸರ್ಕಾರದ ಯಾವುದೇ ಆದೇಶವಿಲ್ಲದಿದ್ದರೂ ಬೆಸ್ಕಾಂನವರು ವಿದ್ಯುತ್‌ ಬಿಲ್‌ ಪಾವತಿಸುವಾಗ ನಾಣ್ಯ ನಿರಾಕರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆರ್‌ಬಿಐನ ಯಾವುದೇ ಆದೇಶ ವಿಲ್ಲದಿದ್ದರೂ ಬ್ಯಾಂಕ್‌ಗಳಲ್ಲಿಯೂ  ನಾಣ್ಯ ತೆಗೆದುಕೊಳ್ಳದಿರುವುದು ಅನುಮಾನಕ್ಕೀಡು ಮಾಡಿದೆ ಎಂದು ಹೇಳಿದರು.

ಈ ಬಗ್ಗೆ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ₹ 10 ಮುಖಬೆಲೆ ನಾಣ್ಯ ತೆಗೆದುಕೊಳ್ಳುವುದನ್ನು ನಾವು ಪೂರ್ಣವಾಗಿ ನಿಲ್ಲಿಸಿಲ್ಲ, ನಮಗೆ ಇದ್ದ ಮಿತಿಯಷ್ಟು ತೆಗೆದುಕೊಂಡಿದ್ದೇವೆ. ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮುಂದಿನ ಸೂಚನೆ ನೀಡುವವರೆಗೂ ತೆಗೆದುಕೊಳ್ಳುವುದಿಲ್ಲ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

ಕೃಷ್ಣ ಪ್ರಗತಿ ಬ್ಯಾಂಕ್‌ ಮ್ಯಾನೇಜರ್‌ ಜಯಕೃಷ್ಣ ಮಾತನಾಡಿ, ‘ನಮ್ಮ ಬ್ಯಾಂಕ್‌ನಲ್ಲಿ ₹ 10ರ ನಾಣ್ಯ ತೆಗೆದುಕೊಳ್ಳುತ್ತಿದ್ದೇವೆ. ಎಂದೂ ನಿರಾಕರಣೆ ಮಾಡಿಲ್ಲ. ಜನಸಂದಣಿ ಇದ್ದಾಗ ಎಣಿಕೆ ಮಾಡಲು ಕಷ್ಟವಾಗುತ್ತದೆ ಎಂದು ಬಿಡುವಿನ ವೇಳೆ ತೆಗೆದುಕೊಂಡು ಬನ್ನಿ ಎಂದು ಹೇಳುತ್ತೇವೆ. ನಮ್ಮಲ್ಲಿ ₹ 1 ಲಕ್ಷ ಮೊತ್ತದ ನಾಣ್ಯಗಳನ್ನು ತೆಗೆದುಕೊಂಡಿದ್ದೇವೆ. ಆದರೆ, ನಮ್ಮಿಂದ ಗ್ರಾಹಕರು ತೆಗೆದುಕೊಳ್ಳುತ್ತಿಲ್ಲ, ಇದಕ್ಕೆ ವಿನಾಕಾರಣ ಹಬ್ಬಿರುವ ವದಂತಿ ಕಾರಣವಾಗಿದೆ’ ಎಂದು ಹೇಳಿದರು.

ಬೆಸ್ಕಾಂನ ಬಿ.ಜಿ.ಕೆರೆ ಶಾಖೆ ಎಂಜಿನಿಯರ್ ರೆಹಮಾನ್‌ ಮಾತನಾಡಿ, ‘ಸದ್ಯಕ್ಕೆ ವಿದ್ಯುತ್‌ ಬಿಲ್‌ ಪಾವತಿಯಲ್ಲಿ ₹ 10 ನಾಣ್ಯ ತೆಗೆದುಕೊಳ್ಳುತ್ತಿಲ್ಲ, ಇದಕ್ಕೆ ನಾವು ಹಣ ಪಾವತಿಸುವ ಚಳ್ಳಕೆರೆ ಎಸ್‌ಬಿಎಂ ಬ್ಯಾಂಕ್‌ನಲ್ಲಿ ತೆಗೆದುಕೊಳ್ಳ ದಿರುವುದು ಕಾರಣವಾಗಿದೆ. ನಾಣ್ಯ ನಿರಾಕರಿಸುವಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದರೆ, ನಾವು ನಿರಾಕರಣೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.