ADVERTISEMENT

ಯುಪಿ ಫಲಿತಾಂಶ ರಾಜ್ಯ ಚುನಾವಣೆಗೆ ದಿಕ್ಸೂಚಿ

ಹೊಳಲ್ಕೆರೆ: ಬಿಜೆಪಿ ಕಾರ್ಯಕಾರಿಣಿಯಲ್ಲಿ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:22 IST
Last Updated 13 ಮಾರ್ಚ್ 2017, 5:22 IST

ಹೊಳಲ್ಕೆರೆ: ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಮುಂದೆ ರಾಜ್ಯದಲ್ಲಿ ಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು ಮಾಜಿ ಶಾಸಕ ಎಂ.ಚಂದ್ರಪ್ಪ ಭವಿಷ್ಯ ನುಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ  ಮಾತನಾಡಿದರು.

‘ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುನಾಮಿಗೆ ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಕೊಚ್ಚಿ ಹೋಗಿವೆ. ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ನಡಸಿದರೂ ಮತದಾರರು ಮೋದಿಯ ಕಾರ್ಯ ಗಳನ್ನು ಮೆಚ್ಚಿ ಮತ ಹಾಕಿದ್ದಾರೆ. ಮುಸ್ಲಿಂ, ದಲಿತ, ಯಾದವ ಹಾಗೂ ಹಿಂದುಳಿದ ವರ್ಗದವರೂ ಮೋದಿಗೆ ಬೆಂಬಲ ಕೊಟ್ಟಿದ್ದಾರೆ. ಮುಂದಿನ ವರ್ಷ ಕರ್ನಾಟಕಲ್ಲೂ ಬಿಜೆಪಿ ಪ್ರಚಂಡ ವಿಜಯ ಸಾಧಿಸಿ ಅಧಿಕಾರಕ್ಕೆ ಏರಲಿದೆ’ ಎಂದರು.

‘ಯಡಿಯೂರಪ್ಪ  ಮುಖ್ಯ ಮಂತ್ರಿ ಆಗಿದ್ದಾಗ ₹ 25 ರಿಂದ 30 ಸಾವಿರ ಕೋಟಿ ಇದ್ದ ಬಜೆಟ್‌ ಅನ್ನು ₹ 1 ಲಕ್ಷ ಕೋಟಿಗೆ ಹೆಚ್ಚಿಸಿದರು. ರೈತರಿಗೆ ಪ್ರತ್ಯೇಕ ಬಜೆಟ್‌ ಮಂಡಿಸಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ₹1 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಶಾಸಕನಾಗಿದ್ದಾಗ ಕ್ಷೇತ್ರ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಂಡಿತು. ಹಗಲೂ, ರಾತ್ರಿ ಶ್ರಮ ವಹಿಸಿ ಕೆಲಸ ಮಾಡಿದೆ. ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆಗಳನ್ನು ನಿರ್ಮಿಸಿದೆ. ಈಗಿನ ಶಾಸಕರು ಅಧಿಕಾರಕ್ಕೆ ಬಂದು 4 ವರ್ಷಗಳಾಗಿದ್ದು, ನನ್ನ ಅವಧಿಯಲ್ಲಿ ಮಾಡಿದ ಕೆಲವು ಕಾಮಗಾರಿಗಳನ್ನು ಇಂದಿಗೂ ಉದ್ಘಾಟನೆ ಆಗಿಲ್ಲ’ ಎಂದು ಚಂದ್ರಪ್ಪ ದೂರಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಮಹೇಶ್ವರಪ್ಪ, ಲಿಂಗರಾಜು, ಬಿಜೆಪಿ ಮುಖಂಡರಾದ ಎಸ್‌.ಎಂ. ಆನಂದಮೂರ್ತಿ, ಎಲ್‌.ಬಿ. ರಾಜಶೇಖರ್‌, ಮಲ್ಲಿಕಾರ್ಜುನ್‌, ಬಸವಂತಪ್ಪ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ಶ್ರೀಕಾಂತ್‌, ಡಿ.ಸಿ.ಮೋಹನ್‌, ಆಶಾರಾಣಿ, ಸರಸ್ವತಿ, ರೂಪಾ, ಕವಿತಾ, ಅಶೋಕ್‌, ವಿಕಾಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.