ADVERTISEMENT

ರಸ್ತೆ ಬದಿ ಮರಗಳ ಮಾರಣ ಹೋಮ

ಎಸ್.ಸುರೇಶ್ ಕುಮಾರ್
Published 27 ಮಾರ್ಚ್ 2017, 4:43 IST
Last Updated 27 ಮಾರ್ಚ್ 2017, 4:43 IST
ಹೊಸದುರ್ಗ: ಪರಿಸರ ಸಮತೋಲನ ಕಾಪಾಡಬೇಕು ಎಂಬ ಉದ್ದೇಶದಿಂದ ಸರ್ಕಾರ ಕೋಟಿ ವೃಕ್ಷ ಆಂದೋಲನ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವೆಡೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.  

ಆದರೆ, ತಾಲ್ಲೂಕಿನ ಕೈನಡು–ಶ್ರೀರಾಂಪುರ ಮಧ್ಯೆ  ರಸ್ತೆ ಬದಿಯ ದೊಡ್ಡ ದೊಡ್ಡ ಹುಣಸೆ ಮರಗಳಿಗೆ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಬೆಂಕಿ ಇಟ್ಟು ಮರಗಳನ್ನು ನೆಲಕ್ಕೆ ಉರುಳಿಸುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 
ರಸ್ತೆ ಬದಿಯಲ್ಲಿ ಮರ ಇದ್ದರೆ ಆ ಮರದ ಸ್ವಾಲೆ ಜಮೀನಿಗೆ ಆಗುತ್ತದೆ. ಇದರಿಂದ ಹೊಲದಲ್ಲಿ ಬೆಳೆ ಸಮೃದ್ಧವಾಗಿ ಆಗುವುದಿಲ್ಲ ಎಂದು ಕೆಲವರು ಮರದ ಬುಡದ ಒಂದು ಭಾಗಕ್ಕೆ ಆಗಾಗ ಬೆಂಕಿ ಇಡುತ್ತಿದ್ದಾರೆ. ಹಾಗೆಯೇ ಇಟ್ಟಿಗೆ ತಯಾರಿಸುವ ಕಾರ್ಖಾನೆಯ ಕೆಲವು ಮಾಲೀಕರೂ ಈ ಕೃತ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 
 
ಬುಡದ ಅಸ್ತಿತ್ವ ಕಳೆದುಕೊಂಡರೆ ಮರ ರಸ್ತೆಗೆ ಉರುಳುತ್ತದೆ. ಬಳಿಕ ಸಾರ್ವಜನಿಕರ ಓಡಾಡಕ್ಕೆ ತೊಂದರೆಯಾಗುತ್ತದೆ ಎಂಬ ನೆಪ ಇಟ್ಟುಕೊಂಡು ಇಟ್ಟಿಗೆ ಸುಡುವವರು  ಸುಲಭವಾಗಿ ಮರ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂಥ  ಕೃತ್ಯ ತಡೆಯಿರಿ ಎಂದು ಅರಣ್ಯ ಇಲಾಖೆಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪಟ್ಟಣದ ಎಸ್‌ಆರ್‌ಎಸ್‌ ಫೌಂಡೇಷನ್‌ ನಿರ್ದೇಶಕ ಎ.ಆರ್‌.ಶಮಂತ್‌ ದೂರಿದ್ದಾರೆ. 
 
‘ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಸದ್ದಿಲ್ಲದೆ ನಡೆಯುತ್ತಿರುವ ಇಂತಹ ಕೃತ್ಯದಿಂದಾಗಿ ರಸ್ತೆ ಬದಿಯಲ್ಲಿದ್ದ ಹಳೆಯ ಮರಗಳು ಕಣ್ಮರೆಯಾಗುತ್ತಿವೆ.   ವಿಶ್ರಾಂತಿ ತಾಣವಾಗಿದ್ದ ಮರಗಳು ಇಲ್ಲವಾಗುತ್ತಿವೆ.  ಕೋಟಿ ವೃಕ್ಷ ಆಂದೋಲನ ಯೋಜನೆಯಡಿ ನೆಟ್ಟಿರುವ ಸಸಿಗಳು ನೀರು  ಇಲ್ಲದೇ  ಒಣಗಿ ಹೋಗುತ್ತಿವೆ. ಅಗತ್ಯ ಇರುವ ಕಡೆ ಸಸಿಗಳನ್ನು ನೆಟ್ಟಿಲ್ಲ. 
 
ಕುದುರೆ ಕಣಿವೆ, ಲಕ್ಕಿಹಳ್ಳಿ ಅರಣ್ಯ ಪ್ರದೇಶದಲ್ಲಿಯೂ ಬೆಲೆಬಾಳುವ ಮರಗಳು ರಾತ್ರಿ ಸಮಯದಲ್ಲಿ ಕಣ್ಮರೆಯಾಗುತ್ತಿವೆ. ಅರಣ್ಯ ಹಾಗೂ ರಸ್ತೆ ಬದಿಯ ಮರಗಳು ಕಡಿಮೆ ಆಗುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚುತ್ತಿವೆ. 
 
ಮಳೆ, ಬೆಳೆ ಸಮರ್ಪಕವಾಗಿ ಆಗುತ್ತಿಲ್ಲ. ಇನ್ನಾದರೂ ಗಿಡ,ಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾ ಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 
***
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.  ಮರದ ಬುಡಕ್ಕೆ ಬೆಂಕಿ ಇಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.
ಎಂ.ಪಿ.ನಾಗೇಂದ್ರನಾಯ್ಕ, ಪ್ರಭಾರವಲಯ ಅರಣ್ಯಾಧಿಕಾರಿ ಹೊಸದುರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.