ADVERTISEMENT

ರಸ್ತೆ ವಿಸ್ತರಣೆ: ಜಿಲ್ಲಾಧಿಕಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 8:39 IST
Last Updated 23 ಆಗಸ್ಟ್ 2017, 8:39 IST

ಚಿತ್ರದುರ್ಗ: ‘ಚಳ್ಳಕೆರೆ ವೃತ್ತದಿಂದ ಗಾಂಧಿ ವೃತ್ತದವರೆಗೆ ರಸ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ತೆರವುಗೊಳ್ಳಲಿರುವ ಕಟ್ಟಡಗಳ ಸಂಪೂರ್ಣ ಮಾಹಿತಿ ನೀಡಿ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಚಳ್ಳಕೆರೆ ಟೋಲ್‌ಗೇಟ್‌ನಿಂದ ಗಾಂಧಿ ವೃತ್ತದವರೆಗೆ ಮಂಗಳವಾರ ರಸ್ತೆ ಪರಿಶೀಲನೆ ನಡೆಸುವಾಗ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

ಈ ಮಾರ್ಗ ಹಳೆ ರಾಷ್ಟ್ರೀಯ ಹೆದ್ದಾರಿಯಾಗಿದೆ. ಅದಕ್ಕಾಗಿ ರಸ್ತೆ ಮಧ್ಯ ಭಾಗದಿಂದ ಎರಡೂ ಬದಿಗಳಲ್ಲೂ 15 ಮೀಟರ್‌ವರೆಗೂ ವಿಸ್ತರಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆಯ ಬಲ ಮತ್ತು ಎಡ ಭಾಗದಲ್ಲಿ ಬಹುತೇಕ ಸರ್ಕಾರಿ ಕಚೇರಿ ಮತ್ತು ಸರ್ಕಾರಿ ನಿವೇಶನಗಳಿವೆ. ಇಲ್ಲಿ ಯಾವುದೇ ಪರಿಹಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ, ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಎಡಭಾಗದಲ್ಲಿ 30, ಬಲಭಾಗದಲ್ಲಿ 24 ಕಟ್ಟಡಗಳು ಮತ್ತು ವಾಣಿಜ್ಯ ಸಂಕೀರ್ಣಗಳಿವೆ.

ಇಲ್ಲೂ ರಸ್ತೆ ಮಧ್ಯದಿಂದ 15 ಮೀಟರ್‌ವರೆಗೂ ಯಾವುದೇ ಪರಿಹಾರ ನೀಡಲು ಅವಕಾಶವಿಲ್ಲ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳಿಂದಲೇ ಪಡೆದರು.

ADVERTISEMENT

ಮೊದಲ ಹಂತದಲ್ಲಿ ಪ್ರವಾಸಿ ಮಂದಿರದವರೆಗೂ ಕಾಮಗಾರಿ ಪೂರ್ಣಗೊಳಿಸಿದ ನಂತರ ಗಾಂಧಿ ವೃತ್ತದವರೆಗಿನ ರಸ್ತೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಗಾಂಧಿ ವೃತ್ತದಿಂದ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಮೆದೇಹಳ್ಳಿ ಮಾರ್ಗದ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಿದೆ.

ಈ ರಸ್ತೆಯನ್ನು ಗಾಂಧಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 4ರ ತನಕ ವಿಸ್ತರಿಸಬೇಕಿದೆ. ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಪೌರಾಯುಕ್ತ ಸಿ.ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಷಣ್ಮುಖಪ್ಪ, ಸಹಾಯಕ ಎಂಜಿನಿಯರ್ ಕೃಷ್ಣಮೂರ್ತಿ, ಕಂದಾಯ ಅಧಿಕಾರಿ ವಾಸಿಂ, ಕಂದಾಯ ನಿರೀಕ್ಷಕ ಜಬೀವುಲ್ಲಾ, ನಗರಸಭೆ ಅಧಿಕಾರಿಗಳೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.