ADVERTISEMENT

ರಾಯಾಪುರ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:40 IST
Last Updated 17 ಮಾರ್ಚ್ 2018, 6:40 IST

ಮೊಳಕಾಲ್ಮುರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ತಾಲ್ಲೂಕಿನ ರಾಯಾಪುರ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೊಟ್ಟೆಪಾಡಿಗಾಗಿ ಕೆಲಸ ಮಾಡುವುದನ್ನು ಬಿಟ್ಟು ನೀರು ಹಿಡಿಯುವ ಕೆಲಸ ಮಾಡುವಂತಾಗಿದೆ. ಇದನ್ನು ನಿಭಾಯಿಸುವಲ್ಲಿ ಪಂಚಾಯ್ತಿ ಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಬು ಎಂಬ ಯುವಕ ಕೀಟನಾಶಕ ಸೇವಿಸಲು ಮುಂದಾರು. ತಕ್ಷಣವೇ ಜತೆಯಲ್ಲಿದ್ದವರು ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಸೂಚನೆ ಹಿನ್ನೆಲೆಯಲ್ಲಿ ಪಿಡಿಒ ಕರಿಬಸಪ್ಪ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಾಗೇಂದ್ರ, ಓಬಳೇಶ್‌, ಪವನ್‌ಕುಮಾರ್, ಬೋರಯ್ಯ, ಮಲ್ಲಿಕಾರ್ಜುನ, ಶಶಿಕುಮಾರ್, ಪಾಲಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.