ADVERTISEMENT

ರೈತರ ಸಮಸ್ಯೆ ಚರ್ಚೆಯಾಗಲಿ: ಶಂಕರಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 10:24 IST
Last Updated 25 ಅಕ್ಟೋಬರ್ 2016, 10:24 IST
ರೈತರ ಸಮಸ್ಯೆ ಚರ್ಚೆಯಾಗಲಿ: ಶಂಕರಮೂರ್ತಿ
ರೈತರ ಸಮಸ್ಯೆ ಚರ್ಚೆಯಾಗಲಿ: ಶಂಕರಮೂರ್ತಿ   

ಶಿವಮೊಗ್ಗ: ‘ರೈತರು ದೇಶದ ಬೆನ್ನೆಲುಬು’ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗದೇ, ರೈತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

ನಗರದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕೃಷಿ ಮೇಳ–2016’ ಸಮಾರೋಪ ಸಮಾರಂಭದಲ್ಲಿ ಜೇನುತುಪ್ಪದ ಪ್ಯಾಕೆಟ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರೈತರ ಸಮಸ್ಯೆಗಳ ಕುರಿತು ಎಷ್ಟು ಚರ್ಚೆ ಮಾಡಿದರೂ ಕಡಿಮೆಯೇ. ನೀರು, ಮಣ್ಣಿನ ಕುರಿತು ರೈತರಿಗೆ ಮಾಹಿತಿ ನೀಡಲು ನಾವು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬು ದನ್ನು ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಕೃಷಿಕರ ಅಗತ್ಯತೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಕೆಲ ವರ್ಷಗಳ ಹಿಂದೆ ರೈತರಿಗೆ ಗೊಬ್ಬರ ನೀಡಲು ಸಾಧ್ಯವಾಗದೆ ಗಲಭೆ ಹಾಗೂ ಗೋಲಿಬಾರ್‌ ನಡೆದಿತ್ತು. ಈ ವೇಳೆ ರೈತನೊಬ್ಬನ ಸಾವೂ  ಸಂಭವಿಸಿತ್ತು. ರೈತರಿಗೆ ಈ ರೀತಿಯ ಸವಾಲುಗಳು ಭವಿಷ್ಯದಲ್ಲಿ ಎದುರಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಸಾವಿರಾರು ವರ್ಷಗಳಿಂದಲೂ ರೈತ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಆದರೆ, ಈಚಿನ ದಿನಗಳಲ್ಲಿ ಕೃಷಿಗೆ ಆದ್ಯತೆ ಕಡಿಮೆಯಾಗಿದೆ. ಕೃಷಿ ಚಟುವಟಿಕೆಗಳನ್ನು ದೂರ ಮಾಡಿ ಸರ್ಕಾರಿ ನೌಕರಿ ಬೇಕೆಂದು ಎಲ್ಲರೂ ಬೇಡಿಕೆ ಇಡುತ್ತಿದ್ದಾರೆ. ಕೃಷಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಹಾಗೂ ಅಗತ್ಯ ಮಾಹಿತಿ ದೊರಕದಿರು ವುದು ಈ ಸನ್ನಿವೇಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಆಧಾರಿತ ತಂತ್ರಜ್ಞಾನದ ಮಾಹಿತಿ ನೀಡಿದಾಗ, ಸಮಾಜಕ್ಕೆ ಬೇಕಾದ ಆಹಾರವನ್ನು ನೀಡಲು ರೈತ ಶಕ್ತನಾಗುತ್ತಾನೆ. ಜತೆಗೆ ಆರ್ಥಿಕವಾಗಿಯೂ ಸದೃಢನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಮೇಳದಲ್ಲಿ ಬೆಳೆಗಳ ಪ್ರಾತ್ಯಕ್ಷಿತೆ, ಮಾಹಿತಿ ನೀಡಲಾಗಿದೆ. ನೂತನ ಬೆಳೆ ವಿಧಾನ ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು. ನೀರು ಕಡಿಮೆ ಬಳಸಿ ಕೃಷಿ ಮಾಡುವ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ ಮಾತನಾಡಿ, ಕೃಷಿಕ ಕೇವಲ ಆಹಾರ ಉತ್ಪಾದನೆಯಲ್ಲಿ ತೊಡಗಿಲ್ಲ. ದೇಶದ ಆಹಾರ ಭದ್ರತೆಯನ್ನೂ ಕಾಪಾಡುತ್ತಿದ್ದಾನೆ. ಬರಗಾಲದಲ್ಲೂ ಪೌಷ್ಟಿಕ ಬೆಳೆ ಬೆಳೆಯುತ್ತಿದ್ದಾನೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತನ ಬದುಕು ಇಂದು ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರಿಗೆ ನೀಡುವ ಸಾಲ ಆಹಾರ ಉತ್ಪಾದನೆಗೆ ನೀಡಿದ ಸಾಲವೆಂದು ಸರ್ಕಾರ ಭಾವಿಸಬೇಕು. ಬ್ಯಾಂಕ್‌ ಅಧಿಕಾರಿಗಳು ಬಲವಂತವಾಗಿ ರೈತರ ಸಾಲ ವಸೂಲಿ ಮಾಡಬಾರದು. ಕೃಷಿ ಉದ್ದಿಮೆಯು ವಿಧಾನ ಸಭೆ ಅಧಿವೇಶನ ದಲ್ಲಿ ಚರ್ಚೆಯಾಗಬೇಕು ಎಂದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಸರ್ಕಾರ ಬೆಳೆಗಳಿಗೆ ಉತ್ತಮ ಬೆಂಬೆಲ ಬೆಲೆ ನೀಡಿದರೆ ರೈತರು ಸಾಲಗಾರರಾಗುವುದು ತಪ್ಪುತ್ತದೆ ಎಂದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಂ.ಆರ್. ದಿನೇಶ್, ಕೃಷಿ ವಿವಿ ಕುಲಪತಿ ಡಾ.ಸಿವಾಸುದೇವಪ್ಪ, ಕೃಷಿ ಮತ್ತು ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ. ನಾಯಕ್, ಕೃಷಿ ವಿವಿ ಡೀನ್ ಡಾ. ವಾಗೀಶ್, ಪ್ರಗತಿಪರ ರೈತ ಆಂಜ ನೇಯ, ಡಾ.ಸೌಮ್ಯಾ   ಉಪಸ್ಥಿತರಿದ್ದರು.

‘ಪ್ರಜಾವಾಣಿ ಹಾಗೂ ಡೆಕ್ಕನ್‌ಹೆರಾಲ್ಡ್‌’ ಸಹಭಾಗಿತ್ವಕ್ಕೆ ಶ್ಲಾಘನೆ
‘ಪ್ರಜಾವಾಣಿ ಹಾಗೂ ಡೆಕ್ಕನ್‌ಹೆರಾಲ್ಡ್‌’ ಪತ್ರಿಕೆಗಳು ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳದ ಎಲ್ಲಾ ಮಾಹಿತಿಗಳನ್ನು ವಿವರವಾಗಿ ಪ್ರಕಟ ಮಾಡುವ ಮೂಲಕ ರೈತರಿಗೆ ಉಪಯುಕ್ತ ಮಾಹಿತಿ ನೀಡಿವೆ ಎಂದು ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಸಿ.ವಾಸುದೇವಪ್ಪ ಶ್ಲಾಘಿಸಿದರು.

ಕೃಷಿ ಮೇಳ ಆರಂಭಕ್ಕೂ ಮೊದಲಿನಿಂದಲೂ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆ ಹಾಗೂ ವಿವಿಧ ಬೆಳೆ ಪದ್ಧತಿಗಳ ಬಗ್ಗೆ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್’ ಬೆಳಕು ಚೆಲ್ಲಿ ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ನೀಡಿವೆ. ರೈತರಿಗೆ ಅನುಕೂಲವಾಗುವಂತಹ ವಿಚಾರ ತಿಳಿಸಲು ವಿಶೇಷ ಪುರವಣಿಗಳನ್ನು ಹೊರತಂದಿವೆ. ನಿತ್ಯದ ವಿಚಾರಗೋಷ್ಠಿಗಳನ್ನು ಹಾಗೂ ಮೇಳದ ವಿಶೇಷತೆಗಳನ್ನು ಸಂಪೂರ್ಣವಾಗಿ ಜನರಿಗೆ ತಲುಪಿಸಿವೆ ಎಂದು ವಾಸುದೇವಪ್ಪ ತಿಳಿಸಿದರು.

4 ದಿನಗಳ ಕೃಷಿ ಜಾತ್ರೆಗೆ ತೆರೆ
ನಗರದ ನವುಲೆ ಕೃಷಿ ಮತ್ತು ತೋಟಗಾರಿಕಾ ವಿವಿ ಆವರಣದಲ್ಲಿ 4 ದಿನಗಳ ಕಾಲ ನಡೆದ ಕೃಷಿ ಮೇಳವನ್ನು ವಿವಿಧೆಡೆಯಿಂದ ಆಗಮಿಸಿದ ಜನರು ಕಣ್ತುಂಬಿಕೊಂಡರು. ರಜಾ ದಿನವಾದ ಭಾನುವಾರ ಕಿಕ್ಕಿರಿದು ಸೇರಿದ್ದ ಜನ ಜಾತ್ರೆ ಕೊನೆಯ ದಿನವಾದ ಸೋಮವಾರವೂ ಮುಂದುವರಿಯಿತು. ಕುಟುಂಬ ಸಮೇತ ಮೇಳಕ್ಕೆ ಆಗಮಿಸಿದ

ಜನರು, ಎಲ್ಲಾ ಮಳಿಗೆಗಳನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂದಿತು. ತಮಗೆ ಅಗತ್ಯವಾದ ಮಾಹಿತಿ ಪಡೆದು, ಇಷ್ಟವಾದ ವಸ್ತುಗಳನ್ನು ಖರೀದಿಸಿದರು. ವಿಭಿನ್ನ ಬಗೆಯ ತಿನಿಸುಗಳ ರುಚಿ ಸವಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.