ADVERTISEMENT

ಲಾಭದಾಯಕ ಇದ್ದಿಲು ಉದ್ದಿಮೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 7:30 IST
Last Updated 17 ಏಪ್ರಿಲ್ 2011, 7:30 IST

ರೈತಾಪಿಜನರು ಕಲ್ಪವೃಕ್ಷವೆಂದೆ ನಂಬಿರುವ ‘ತೆಂಗು’ ನೂರಕ್ಕೆ ನೂರು ಜನೋಪಯೋಗಿ. ಇಂತಹ ತೆಂಗಿನ ಉತ್ಪನ್ನಗಳಲ್ಲೊಂದಾದ ಚಿಪ್ಪು ಸುಟ್ಟು ಇದ್ದಿಲು ತಯಾರಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಉದ್ದಿಮೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಹೊಸದುರ್ಗ ತಾಲ್ಲೂಕಿನ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ತೆಂಗು ರೈತರಿಗಷ್ಟೇ ಆಧಾರವಾಗಿಲ್ಲ ಅದರ ವಿವಿಧ ಉತ್ಪನ್ನಗಳನ್ನು ನಂಬಿ ಬದುಕುತ್ತಿರುವ ನೂರಾರು ಕುಟುಂಬಗಳು ತಾಲ್ಲೂಕಿನಲ್ಲಿವೆ.

ತೆಂಗಿನ ಗರಿಯ ಕಡ್ಡಿ,  ಸಿಪ್ಪೆ, ಚಿಪ್ಪು ಕೂಡ ಆದಾಯದ ಮೂಲಗಳೇ ಆಗಿವೆ. ಇದರ ಜತೆಗೆ ಎಡೆಮಟ್ಟೆ, ಸೀಬಿ, ಕುರಂಬಳಕೆ, ಇತ್ಯಾದಿಗಳನ್ನು ಉರುವಲಾಗಿ ಬಳಸಲಾಗುತ್ತದೆ. ಒಟ್ಟಾರೆ ತೆಂಗಿನ ಮರದ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುತ್ತದೆ.

 ಕಿಟ್ಟದಾಳ್, ಕಂಚೀಪುರ, ಮತ್ತೋಡು, ಅರೇಹಳ್ಳಿ, ಬೊಮ್ಮೇನಹಳ್ಳಿ, ಎಸ್. ನೇರಲಕೆರೆ, ಸಾದರಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ತೆಂಗಿನ ಹತ್ತಾರು ವರ್ಷಗಳಿಂದ ಅನೇಕ ಮಂದಿ ತೆಂಗಿನ ಚಿಪ್ಪಿನಿಂದ ಇದ್ದಿಲು ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೋಡು ಹೋಬಳಿ ಕಂಚೀಪುರ ಗ್ರಾಮದ ಕುಮಾರಸ್ವಾಮಿ ಸುಮಾರು 20 ವರ್ಷಗಳಿಂದ ಈ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಸಮೀಪದ ಕಿಟ್ಟದಾಳ್ ಗ್ರಾಮದ ಹೊರವಲಯದಲ್ಲಿ ಘಟಕ ಸ್ಥಾಪಿಸಿರುವ ಅವರು, ತೆಂಗಿನ ಚಿಪ್ಪಿನ ಇದ್ದಿಲನ್ನು ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿರುವ ಕಾರ್ಖಾನೆಗಳಿಗೆ ನೇರವಾಗಿ ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ.

ADVERTISEMENT

ತೆಂಗಿನ ಚಿಪ್ಪಿನಿಂದ ತಯಾರಾದ ಇದ್ದಿಲು ಆಲ್ಕಲೈನ್ ಬ್ಯಾಟರಿ ತಯಾರಿಕೆ, ನೀರು ಶುದ್ಧೀಕರಣ, ಡಿಸ್ಟಿಲರಿ, ಫೌಂಡ್ರಿಗಳಲ್ಲಿ ಬಳಕೆಯಾಗುತ್ತದೆ. ಗುಜರಾತ್, ದೆಹಲಿ, ತಮಿಳುನಾಡು, ಕೇರಳ ಮತ್ತಿತರೆ ರಾಜ್ಯಗಳಲ್ಲಿರುವ ಕಾರ್ಖಾನೆಗಳಲ್ಲಿ ಇದ್ದಿಲಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡುತ್ತಾರೆ.

ಸುತ್ತಲಿನ ಗ್ರಾಮಗಳಲ್ಲಿರುವ ತೆಂಗು ಬೆಳೆಗಾರರಿಂದ ಪ್ರತಿ ಒಂದ ಸಾವಿರ ತೆಂಗಿನ ಚಿಪ್ಪಿಗೆ ್ಙ 450-500ನಂತೆ  ಖರೀದಿಸಿ ತರಲಾಗುತ್ತದೆ. 10 ಟನ್ ಚಿಪ್ಪಿನಿಂದ ಒಂದು ಟನ್ ಇದ್ದಿಲು ಉತ್ಪಾದನೆಯಾಗುತ್ತದೆ. ವಿಶೇಷವಾಗಿ ತೆಗೆಯಲಾದ ಗುಂಡಿಗಳಲ್ಲಿ ಸುಮಾರು 30 ಸಾವಿರ ಚಿಪ್ಪುಗಳನ್ನು ಹಾಕಿ ಬೆಂಕಿ ತಗುಲಿಸಲಾಗುತ್ತದೆ. ಬೆಂಕಿ ಹತ್ತಿಕೊಂಡು ಉರಿದು ಬೂದಿಯಾಗದೆಂತೆ ಆಗಿಂದಾಗ್ಗೆ ನೀರು ಹಾಕುವ ಕಾರ್ಮಿಕರು ಹೆಚ್ಚಿನ ನಿಗಾವಹಿಸುತ್ತಾರೆ. ದಿನವೊಂದಕ್ಕೆ 2-3 ಟನ್ ಇದ್ದಿಲು ಉತ್ಪಾದನೆ ಮಾಡಲಾಗುತ್ತದೆ ಎನ್ನುತ್ತಾರೆ ಅವರು.

ತೆಂಗಿನ ಚಿಪ್ಪಿನ ಇದ್ದಿಲನ್ನು ನೇರವಾಗಿ ಕಾರ್ಖಾನೆಗೆ ಮಾರಾಟ ಮಾಡುವವರು ತಾಲ್ಲೂಕಿನಲ್ಲಿ ವಿರಳ. ಕಿಟ್ಟದಾಳ್ ಗ್ರಾಮದ ಜಯರಾಮಪ್ಪ ಸುಮಾರು 40 ವರ್ಷಗಳ ಹಿಂದೆ ತಂದೆ ನರಸಪ್ಪ ತೊಡಗಿಕೊಂಡಿದ್ದ ಇದ್ದಿಲು ತಯಾರಿಕೆ ವೃತ್ತಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರು ತಯಾರಿಸುವ ಇದ್ದಿಲನ್ನು ಕಾರ್ಖಾನೆಗಳಿಗೆ ನೇರವಾಗಿ ಮಾರಾಟ ಮಾಡುವುದಿಲ್ಲ. ತುಮಕೂರು ಜಿಲ್ಲೆಯ ತಿಪಟೂರು, ಕೆ.ಬಿ.ಕ್ರಾಸ್ ಮತ್ತಿತರ ಕಡೆ ಇರುವ ಏಜನ್ಸಿಯವರಿಗೆ ಪ್ರತಿ ಟನ್‌ಗೆ ್ಙ 15 ಸಾವಿರದಂತೆ (ಬೇಡಿಕೆಗೆ ಅನುಗುಣವಾಗಿ ದರದಲ್ಲಿ ಏರಿಳಿತ ಇರುತ್ತದೆ) ಮಾರಾಟ ಮಾಡುತ್ತಾರೆ.

ಒಂದು ಕಾಲಕ್ಕೆ ತಾಲ್ಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಾರಂಭವಾಗಿದ್ದ ತೆಂಗಿನ ನಾರಿನ ಘಟಕಗಳಲ್ಲಿ ಬಹುತೇಕ ಘಟಕಗಳು ನಷ್ಟದಿಂದ ಮುಚ್ಚಿವೆ. ಕೆಲವು ಮಾತ್ರ ಕುಂಟುತ್ತಾಸಾಗಿವೆ. ಹೆಚ್ಚಿನ ಬಂಡವಾಳ ಇಲ್ಲದೆ ತೆಂಗಿನ ಚಿಪ್ಪಿನಿಂದ ಇದ್ದಿಲು ತಯಾರಿಸುವ ಉದ್ದಿಮೆ ಮಾತ್ರ ನಷ್ಟಕ್ಕೊಳಗಾಗದೆ ಆರೋಗ್ಯಕರವಾಗಿ ನಡೆಯುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.