ADVERTISEMENT

ವಿದರ್ಭ ಮಾದರಿಯ ಸಾಲ ಮನ್ನಾಕ್ಕೆ ಒತ್ತಾಯ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 8:42 IST
Last Updated 20 ಜನವರಿ 2017, 8:42 IST
ವಿದರ್ಭ ಮಾದರಿಯ ಸಾಲ ಮನ್ನಾಕ್ಕೆ ಒತ್ತಾಯ
ವಿದರ್ಭ ಮಾದರಿಯ ಸಾಲ ಮನ್ನಾಕ್ಕೆ ಒತ್ತಾಯ   

ಚಿತ್ರದುರ್ಗ: ವಿದರ್ಭ ಪ್ಯಾಕೇಜ್‌ ಮಾದರಿಯಲ್ಲಿ ಪರಿಗಣಿಸಿ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯ್ತಿ ಮುಂಭಾಗದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲೆಯು ಸತತ ಬರಗಾಲಕ್ಕೆ ತುತ್ತಾಗಿರುವ ಕಾರಣ ವಿಶೇಷ ಘಟಕವೆಂದು ಪರಿಗಣಿಸಿ ಸಾಲ ಮನ್ನಾ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಏಳೆಂಟು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಬರಗಾಲ ಆವರಿಸಿದೆ. ರೈತರ ಬದುಕು ತುಂಬಾ ಗಂಭೀರ ಸ್ಥಿತಿಯಲ್ಲಿದ್ದು, ಜೀವನ ನಿರ್ವಹಣೆಗೆ ಮತ್ತು ಜಾನುವಾರುಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುವಂತಾಗಿದೆ ಎಂದು  ಅಳಲು ತೋಡಿಕೊಂಡರು.

‘ಕೇಂದ್ರ ಸರ್ಕಾರ 2016ರ ನ. 8 ರಂದು ಗರಿಷ್ಠ ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ರೈತರು ಬೆಳೆದ ಯಾವುದೇ ಫಸಲಿಗೆ ಬೆಲೆ ಇಲ್ಲದಂತಾಗಿದೆ. ಉತ್ಪಾದನಾ ವೆಚ್ಚ ಜಾಸ್ತಿ, ಆದಾಯ ಮಾತ್ರ ತುಂಬಾ ಕಡಿಮೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರಗಳು ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯ ಸಂಪೂರ್ಣ ಬರದ ಚಿತ್ರಣವೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಗೆ ತಿಳಿದಿದೆ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ರಾಜ್ಯದ ಎಲ್ಲ ರೈತರ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಮಾಡಲು ಒತ್ತಾಯಿಸಬೇಕು’ ಎಂದರು.

‘ಬರದ ನಾಡಿನ ಜನತೆಯ ಬಹುದಿನದ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು. ಈ ಮೂಲಕ ರೈತರು, ಬಡವರು ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ನೀರಿನ ತೊಂದರೆ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ಚಳ್ಳಕೆರೆಯ ಪಾವಗಡ ರಸ್ತೆ ಮಾರ್ಗದಲ್ಲಿ ಇರುವ ರೈಲ್ವೆ ದಾರಿಗೆ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ 2017ರ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡುವ ಮೂಲಕ ಕಾಮಗಾರಿ ಪ್ರಾರಂಭಿಸಬೇಕು’ ಎಂದು ಕೋರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಸಂಚಾಲಕ ಧನಂಜಯ, ಬಸ್ತಿಹಳ್ಳಿ ಸುರೇಶ್‌ಬಾಬು, ಚಿದಾನಂದಯ್ಯ, ಸಿ.ಆರ್.ತಿಮ್ಮಣ್ಣ, ಪ್ರವೀಣ್‌ಕುಮಾರ್, ಪಿ.ಬಿ.ಚಂದ್ರಪ್ಪ, ಕೆ.ಪಿ.ಭೂತಯ್ಯ, ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.