ADVERTISEMENT

ವೈಭವದ ಯಳಗಂಧೇಶ್ವರಿ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 8:45 IST
Last Updated 15 ಏಪ್ರಿಲ್ 2017, 8:45 IST

ಹೊಸದುರ್ಗ: ಚೋಳರ ಕಾಲದಲ್ಲಿ ನೀಲಾವತಿ ಪಟ್ಟಣವೆಂದೇ ಪ್ರಖ್ಯಾತಿಯಾಗಿದ್ದ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನೀರಗುಂದ ಯಳಗಂಧೇಶ್ವರಿ ದೇವಿ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.

ರಥೋತ್ಸವದ ಅಂಗವಾಗಿ ಕಳೆದ ಸೋಮವಾರದಿಂದಲೂ ಮೀಸಲು ಸೇವೆ, ಗಂಗಾಪೂಜೆ, ಪರೇವು ಸೇವೆ, ನೂರೊಂದು ಎಡೆಸೇವೆ, ಮಧುವಣಿಗೆ ಶಾಸ್ತ್ರ, ದೇವಾಂಗ, ಉಪವೀರ, ಲಿಂಗಾಯತ, ಗೊಲ್ಲರು, ಮಡಿವಾಳ, ಕುರುಬ, ಭೋವಿ, ಅಕ್ಕಸಾಲಿಗ, ಕೊರಮ ಸಮಾಜದವರಿಂದ ಬಾನೋತ್ಸವ, ಬೇವಿನ ಸೀರೆ ಮತ್ತು ಕಳಶೋತ್ಸವ ಧಾರ್ಮಿಕ ಆಚರಣೆಗಳು ಗ್ರಾಮದ ಎಲ್ಲ ಜನಾಂಗದವರ ಸಾಮರಸ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆದವು.

ಗುರುವಾರ ರಾತ್ರಿ ಗ್ರಾಮದ ಕಾಲಭೈರವೇಶ್ವರ ಸ್ವಾಮಿ, ಹನುಮಂತ ದೇವರು ಹಾಗೂ ಯಳಗಂಧೇಶ್ವರಿ ದೇವಿಯ ಹೂವಿನ ಉತ್ಸವದ ಭವ್ಯ ಮೆರವಣಿಗೆ ಗ್ರಾಮದ ರಾಜಬೀದಿಯಲ್ಲಿ ನೆರವೇರಿತು. ಶುಕ್ರವಾರ ಮುಂಜಾನೆ ಹಸಿರು ತೋರಣ, ಬಣ್ಣ ಬಣ್ಣದ ಬಟ್ಟೆ, ದೊಡ್ಡ ಹೂ ಮಾಲೆ ಹಾಗೂ ಬಾವುಟಗಳಿಂದ ಸುಂದರವಾಗಿ ಅಲಂಕರಿಸಿದ್ದ ರಥಕ್ಕೆ ಯಳಗಂಧೇಶ್ವರಿ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಕಳಸ ಪೂಜೆ, ಹಿಡುಗಾಯಿ ಸೇವೆ, ಬಲಿ ಅನ್ನ ಹಾಗೂ ಮಹಾಮಂಗಳಾರತಿ ಪೂಜೆ ನಡೆಯಿತು.

ADVERTISEMENT

ಬಳಿಕ ಭಕ್ತರು ತೇರನ್ನು ದೇಗುಲದ ಆವರಣದಿಂದ ಐತಿಹಾಸಿಕ ಸಿದ್ಧೇಶ್ವರ ದೇಗುಲದವರೆಗೆ ಎಳೆದರು. ಅಲ್ಲಿಂದ ಪುನಃ ಮೂಲಸ್ಥಾನಕ್ಕೆ ತೇರನ್ನು ಎಳೆ ತಂದರು. ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು. ಗುಂಡಿನ ಚಾಟಿ ಪವಾಡ, ಚೋಮನ ಕುಣಿತ ನೃತ್ಯಗಳು ಗಮನ ಸೆಳೆದವು. ರಾಜ್ಯದೆಲ್ಲೆಡೆ ನೆಲೆಸಿರುವ ಅಪಾರ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಪಾನಕ ಬಂಡಿ, ಪಂಚ ಪಲ್ಲಾರ, ಬೇವಿನ ಸೇರಿ ಹಾಗೂ ಘಟೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಶನಿವಾರ ಬೆಳಿಗ್ಗೆ ಹಣ್ಣಿನ ರಾಶಿ ಪರಿಷೆ ನಡೆಯಲಿದೆ.

‘ರಥೋತ್ಸವದ ದಿನ ಯುವತಿಯರು ಉಪವಾಸವಿದ್ದು ಮಳ್ಳಾರತಿಯ ಬುಟ್ಟಿ ಹೊತ್ತು ಮೆರವಣಿಗೆಯಲ್ಲಿ ರಥದ ಬಳಿಗೆ ಬರುತ್ತಾರೆ. ಮಳ್ಳಾರತಿ ಹೊತ್ತ ಯುವತಿಯರು ಅಲಂಕೃತ ರಥವನ್ನು ಮೂರು ಸುತ್ತು ಸುತ್ತಿದ ಬಳಿಕ ರಥೋತ್ಸವದ ಮೇಲೆ ಮಳ್ಳಾರತಿ ಇಟ್ಟರೆ ಮಾತ್ರ ದೇವಿಯ ರಥ ಸರಾಗವಾಗಿ ಮುಂದೆ ಸಾಗುತ್ತದೆ. ಮಳ್ಳಾರತಿ ಮಾಡದೇ ಜಾತ್ರೆ ಮಾಡಿದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗುವುದಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಆರ್‌.ಪರಮೇಶ್ವರಪ್ಪ, ಸದಸ್ಯೆ ರೇಖಾ ಮೋಹನಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.