ADVERTISEMENT

ಶರಣರ ಮಾತಿನಲ್ಲಿ ಅಸತ್ಯದ ಕತ್ತಲೆ ಮಾಯ

ಆಧ್ಯಾತ್ಮಿಕ ಪ್ರವಚನ ಸಮಾರಂಭದಲ್ಲಿ ಸಿದ್ದೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:33 IST
Last Updated 20 ಫೆಬ್ರುವರಿ 2017, 5:33 IST

ಹೊಸದುರ್ಗ: ‘12ನೇ ಶತಮಾನದ ಬಸವಾದಿ ಶಿವಶರಣರ ಯಾವ ಮಾತಿನಲ್ಲೂ ಅಸತ್ಯದ ಕತ್ತಲೆ, ರಾಗ ದ್ವೇಷಗಳ ಮಾಲಿನ್ಯ ಇರಲಿಲ್ಲ’ ಎಂದು ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಾಮನೂರು ಶಿವಶಂಕರಪ್ಪ ರಂಗಮಂದಿರದಲ್ಲಿ ಶನಿವಾರ ನಡೆದ ಆಧ್ಯಾತ್ಮಿಕ ಪ್ರವಚನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಶರಣರ ಮಾತುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶರಣರ ಪ್ರಕಾರ ಬದುಕು ಸಾರ್ಥಕಗೊಳ್ಳಲು ಯೋಗ ಸಾಧನೆ, ಘೋರ ತಪಸ್ಸು ಮಾಡಬೇಕಿಲ್ಲ. ಕೇವಲ ಶರಣರ ನುಡಿಯನ್ನು ಕೇಳಿ, ಅದರಂತೆ ನಡೆದುಕೊಂಡರೆ ಸಾಕು ದೇವರ ದರ್ಶನ ಸಾಧ್ಯವಾಗುತ್ತದೆ. 900 ವರ್ಷಗಳಾದರೂ ಶರಣರ ಮಾತು ಮಾಸಿಲ್ಲ. ಒಳಗಿರುವ ಸೌರಭ ಹೋಗಿಲ್ಲ. ಆ ಮಾತುಗಳನ್ನು ಕೇಳುತ್ತಾ ಇದ್ದರೆ ಸತ್ಯದ ದರ್ಶನವಾಗುವುದು ಅಲ್ಲದೆ ಸುಂದರ ಜೀವನದ ಮಾರ್ಗ ಗೊತ್ತಾಗುತ್ತದೆ’ ಎಂದು ಸಲಹೆ ನೀಡಿದರು.

‘ಯಾವ ವಸ್ತುವೂ ಇಂದು ಇರುವ ಹಾಗೆ ನಾಳೆ ಇರುವುದಿಲ್ಲ. ರಾಜರು, ಯೋಗಿಗಳು ಯಾರೂ ಉಳಿಯುವುದಿಲ್ಲ. ಹೊರಗಿನ ದೀಪಗಳು ಆರಿ ಹೋಗಬಹುದು, ಆದರೆ, ಜೀವದೊಳಗಿನ ಜ್ಯೋತಿ ಎಂದೂ ಆರುವುದಿಲ್ಲ. ಎಣ್ಣೆ, ಬತ್ತಿ, ದೀಪದಂತೆ ದೇಹ, ಜೀವನ, ಶಾಶ್ವತವಲ್ಲ. ಯಾವುದು ನಾಶಮಾಡಲು ಬರುವುದಿಲ್ಲವೋ ಅದೇ ನಾನು. ವಸ್ತುಗಳ ಹಿಂದೆ ಓಡುವ ನಾವು ದುಃಖಕ್ಕೆ ಒಳಗಾಗುತ್ತೇವೆ. ಇದನ್ನು ಇತಿಹಾಸದ ತುಂಬೆಲ್ಲ ನೋಡುತ್ತೇವೆ. ಸಂಸ್ಕೃತಿಗಳು ಅರಳುತ್ತವೆ, ಬೆಳೆಯುತ್ತವೆ ಅಷ್ಟೇ ವೇಗವಾಗಿ ಅಳಿದು ಹೋಗುತ್ತವೆ. ಇದಕ್ಕೆ ಮಾನವ ಸಂಸ್ಕೃತಿಯೂ ಹೊರತಲ್ಲ’ ಎಂದು ಹೇಳಿದರು.

‌ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಅಹಂಕಾರವನ್ನು ತ್ಯಜಿಸಿದಾಗ ವ್ಯಕ್ತಿಯ ಉದ್ಧಾರ. ಇಂದು ವ್ಯಕ್ತಿಗಳೆಲ್ಲ ಅಹಂಕಾರದ ಮೊಟ್ಟೆಗಳಾಗುತ್ತಿರುವುದು ದುರದೃಷ್ಟಕರ ಸಂಗತಿ. ಬಸವಣ್ಣನವರ ಮುಗಿದ ಕೈ, ಬಾಗಿದ ತಲೆ ನಮ್ಮದಾಗಬೇಕು. ನಾನೊಬ್ಬ ಭಕ್ತ ಇನ್ನುಳಿದವರೆಲ್ಲ ಲಿಂಗ
ಸ್ವರೂಪಿಗಳು ಎನ್ನುವ ಭಾವ ಬಂದರೆ ವ್ಯಕ್ತಿಯ ವಿಕಾಸವಾಗುತ್ತದೆ. ಆಹಂಕಾರವನ್ನು ತ್ಯಾಗ ಮಾಡಿದವನು ಶಿವ, ಅಹಂಕಾರವನ್ನು ಮೈಗೂಡಿಸಿಕೊಂಡವನು ಶವನಾಗುವನು’ ಎಂದು ಹೇಳಿದರು.


ಆಲಮಟ್ಟಿಯ ರೇವಣಸಿದ್ದ ಸ್ವಾಮೀಜಿ, ಗೋಕಾಕಿನ ಮಲ್ಲಯ್ಯ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ ಹಾಜರಿದ್ದರು. ಶಿವಸಂಚಾರದ ಕೆ.
ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ವಚನಗೀತೆ ಹಾಡಿದರು. ಗುರು ಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಕರ್ಷಕ ವಚನ ನೃತ್ಯರೂಪಕ ಪ್ರದರ್ಶಿಸಿದರು. ಸಾಹಿತಿ ಚಟ್ನಳ್ಳಿ ಮಹೇಶ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕ ಜಯಣ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT