ADVERTISEMENT

ಶಾಲೆಯಲ್ಲೇ ಮಕ್ಕಳಿಗೆ ಆಧಾರ್ ನೋಂದಣಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 10:56 IST
Last Updated 26 ನವೆಂಬರ್ 2015, 10:56 IST

ಚಿತ್ರದುರ್ಗ: ‘ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಲ್ಲೇ  ಆಧಾರ್ ಕಾರ್ಡ್ ನೋಂದಣಿ ಮಾಡಲಾ ಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಆಧಾರ್ ನೋಂದಣಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಧಾರ್‌ ಇಲ್ಲದವರಿಗೆ ಆದ್ಯತೆ: ಜಿಲ್ಲೆಯಲ್ಲಿ 2,53,838 ವಿದ್ಯಾರ್ಥಿಗಳು 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 1,31,05 ವಿದ್ಯಾರ್ಥಿಗಳು ಆಧಾರ್ ಹೊಂದಿದ್ದು, ಉಳಿದ 1,22,250 ವಿದ್ಯಾರ್ಥಿಗಳಿಗೆ ಆಧಾರ್ ನೊಂದಣಿಯಾಗಿಲ್ಲ. ವಿದ್ಯಾರ್ಥಿ ಗಳ ವಿವರ ಗಣಕೀಕರಣ ಮಾಡಲು ಆಧಾರ್ ಅಗತ್ಯವಾಗಿದ್ದು, ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂಹೇಳಿದರು.

ಮೊಬೈಲ್‌ ಆಧಾರ್‌ ಕಿಟ್‌ ವಿತರಣೆ: ಆಯಾ ಶಾಲೆಯಲ್ಲೆ ಆಧಾರ್ ನೋಂದಣಿ ಮಾಡಿಸಲು ಜಿಲ್ಲೆಗೆ 20 ಮೊಬೈಲ್ ಆಧಾರ್ ಕಿಟ್ ನೀಡಲಾಗಿದ್ದು, ವಾಹನ ಗಳ ವ್ಯವಸ್ಥೆ ಮಾಡಲಾಗಿದೆ. ಹೊಸದುರ್ಗ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಆಧಾರ್ ನೋಂದಣಿ ಮಾಡಿಸದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ತಲಾ ಎರಡು ಕಿಟ್‌ಗಳನ್ನು ನೀಡಲಾಗಿದೆ. ಉಳಿದ ನಾಲ್ಕು ತಾಲ್ಲೂಕುಗಳಿಗೆ ತಲಾ ನಾಲ್ಕು ಕಿಟ್ ನೀಡಲಾಗಿದೆ ಎಂದರು.

ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯಾಗಿರಲಿ, ಅಲ್ಲಿಗೆ ಬಂದು ನೋಂದಣಿ ಮಾಡಿಸಲಾಗುತ್ತದೆ. ಈಗಾಗಲೇ ಆಯಾ ಶಾಲಾವಾರು ನೋಂದಣಿಗೆ ವೇಳಾಪಟ್ಟಿ ಕೂಡ ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಪ್ರತಿದಿನ ಆಧಾರ್ ಪ್ರಗತಿಯ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ನೀಡುವುದು ಕಡ್ಡಾಯವಾಗಿದೆ ಎಂದರು.

ಎಲ್ಲಾ ವಿದ್ಯಾರ್ಥಿಗಳ ಆಧಾರ್ ನೋಂದಣಿ ಮುಗಿಯುವ ತನಕ ನೋಂದಣಿ ನಡೆಯಲಿದ್ದು, ಯಾರೂ ಸಹ ಆಧಾರ್ ನೋಂದಣಿಯಿಂದ ಹೊರಗುಳಿಯಬಾರದು. ವಿದ್ಯಾರ್ಥಿ ಈಗಾಗಲೇ ಆಧಾರ್ ನೋಂದಾಯಿಸಿ ದ್ದಲ್ಲಿ ಪುನಃ ನೋಂದಣಿಯಾಗದ ರೀತಿ ನೋಡಿಕೊಳ್ಳಬೇಕು. ಒಂದು ಭಾರಿ ಆಧಾರ್ ನೋಂದಣಿಯಾಗಿದ್ದಲ್ಲಿ ಮತ್ತೆ ತತ್ರಾಂಶ ತೆಗೆದುಕೊಳ್ಳುವುದಿಲ್ಲ, ಆದರೆ, ಸಮಯ ವ್ಯರ್ಥವಾಗುತ್ತದೆ. ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಕೆಂಗಪ್ಪ, ಆಧಾರ್ ನೋಡಲ್ ಅಧಿಕಾರಿ ರಂಗನಾಥ್, ಡಿಡಿಪಿಐ ರವಿಶಂಕರರೆಡ್ಡಿ, ರಾಮಯ್ಯ, ಹನುಮಂತರಾಯಪ್ಪ, ತಿಮ್ಮಣ್ಣ, ಪಿ.ರಾಜಣ್ಣ, ಬಷೀರ್ ಇದ್ದರು.

ಯಾವ ತಾಲ್ಲೂಕಿನಲ್ಲಿ ಎಷ್ಟು ವಿದ್ಯಾರ್ಥಿಗಳು?
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 1,22,250 ವಿದ್ಯಾರ್ಥಿಗಳಿಗೆ ಇನ್ನೂ ಆಧಾರ್ ಕಾರ್ಡ್ ನೋಂದಣಿಯಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
***
23,151 ಚಳ್ಳಕೆರೆ
32,842 ಚಿತ್ರದುರ್ಗ
20,110 ಹಿರಿಯೂರು
16,807 ಹೊಳಲ್ಕೆರೆ
15,688 ಹೊಸದುರ್ಗ
13,652 ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.