ADVERTISEMENT

ಸಮಗ್ರ ನೀರಾವರಿ ಯೋಜನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:22 IST
Last Updated 28 ಜೂನ್ 2016, 11:22 IST

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿಗೆ ಸಮಗ್ರ ನೀರಾವರಿ ಯೋಜನೆ ಅನುಷ್ಠಾನವಾಗಬೇಕು. ಕೊಬ್ಬರಿಗೆ ಕನಿಷ್ಠ ₹ 15 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ಹೊಸದುರ್ಗದಲ್ಲಿ ಶೀಘ್ರವಾಗಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು. ಕೇಂದ್ರ ಸರ್ಕಾರದ ಆಮದು ಮತ್ತು ರಪ್ತು ನೀತಿ ಕೂಡಲೇ ರದ್ದಾಗಬೇಕು.....

ತಾಲ್ಲೂಕಿನ ಗಡಿ ಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರ  ಬೇಡಿಕೆಗಳಿವು.ಕೇಂದ್ರದ ಆಮದು ಮತ್ತು ರಪ್ತು ನೀತಿಯಿಂದ ತೆಂಗು ಹಾಗೂ ಅಡಿಕೆ ಬೆಳೆಯ ದರ ಕುಸಿತವಾಗಿದ್ದು, ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರ ಹಿತ ಕಾಪಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಮುಂದಾಗುತ್ತಿಲ್ಲ.

ದುಂಡಾಣು ಅಂಗಮಾರಿ ರೋಗಬಾಧೆಯಿಂದ ಸಾಲದ ಸುಳಿಗೆ ಸಿಲುಕಿರುವ ತಾಲ್ಲೂಕಿನ ದಾಳಿಂಬೆ ಬೆಳೆಗಾರರ ಬೆಂಬಲಕ್ಕೆ ರಾಜ್ಯ ಸರ್ಕಾರ ಮುಂದಾಗದಿರುವುದು ದುರಂತದ ಸಂಗತಿ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳ್ಳಿಸಬೇಕು. ಈ ಯೋಜನೆಯಡಿ ಕೇವಲ ಹಳ್ಳಿಗಳಿಗೆ ನೀರು ಹಾಯಿಸುವ ನೀತಿಯನ್ನು ಸರ್ಕಾರ ಕೈಬಿಡಬೇಕು. ಎಲ್ಲಾ ಗ್ರಾಮಗಳು ನೀರಾವರಿ ಯೋಜನೆಗೆ ಒಳಪಡಬೇಕು. ಆ ಮೂಲಕ ನಿರಂತರವಾಗಿ ಬರದ ತುತ್ತಿಗೆ ಸಿಲುಕಿರುವ ತಾಲ್ಲೂಕಿನ ರೈತರ ಬದುಕು ಹಸನಾಗಬೇಕು. ಸಮಗ್ರ ನೀರಾವರಿ ಯೋಜನೆ ವಿಷಯದಲ್ಲಿ ರಾಜಕೀಯ ಭೇದ ಮರೆತು, ಬಯಲು ಸೀಮೆಗೆ ಭದ್ರೆಯ ನೀರನ್ನು ತತ್ವರಿತವಾಗಿ ಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಗಡಿ ಗ್ರಾಮಗಳಾದ ಚಿಕ್ಕಬ್ಯಾಲದಕೆರೆ, ಹೆಗ್ಗೆರೆ, ಜೋಡಿ ಶ್ರೀರಾಂಪುರ, ಹಾಗಲಕೆರೆ, ಪಿಲಾಪುರ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ 150ಕ್ಕೂ ಅಧಿಕ ರೈತ ಮುಖಂಡರನ್ನು ಪೊಲೀಸರು ಬಂಧಿಸಿ, ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.

ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕಾರ್ಯಾಧ್ಯಕ್ಷ ಬಯಲಪ್ಪ, ತಾಲ್ಲೂಕು ಅಧ್ಯಕ್ಷ ಲಿಂಗರಾಜು, ಕರಿಸಿದ್ದಯ್ಯ, ಎಚ್‌.ಸ್ವಾಮಿ, ಉಪಾಧ್ಯಕ್ಷ ಮುರುಗೇಂದ್ರಪ್ಪ ಮತ್ತಿತರ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.