ADVERTISEMENT

‘ಸಾಲಮನ್ನಾ: ಜಿಲ್ಲೆಯಲ್ಲಿ ಹಿರಿಯೂರಿಗೆ 2ನೇ ಸ್ಥಾನ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 9:02 IST
Last Updated 31 ಡಿಸೆಂಬರ್ 2017, 9:02 IST

ಹಿರಿಯೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ಸಂಘಗಳಲ್ಲಿನ ₹ 50 ಸಾವಿರದವರೆಗಿನ ರೈತರ ಸಾಲಮನ್ನಾ ಮಾಡಿದ್ದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಲಾಭ ಪಡೆದ ತಾಲ್ಲೂಕುಗಳಲ್ಲಿ ಹಿರಿಯೂರು 2ನೇ ಸ್ಥಾನದಲ್ಲಿದೆ’ ಎಂದು ಶಾಸಕ ಡಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ಹೊಸಯಳನಾಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಲಮನ್ನಾ ರೈತರಿಗೆ ಮರುಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 7474 ರೈತರ 25.2ಕೋಟಿ ಸಾಲಮನ್ನಾ ಆಗಿದೆ. ₹ 50 ಸಾವಿರ ಸಾಲಮನ್ನಾ ಮಾಡಿರುವುದರಿಂದ ಲಕ್ಷಾಂತರ ಸಣ್ಣ ರೈತರಿಗೆ ಅನುಕೂಲವಾಗಿದೆ. ಸಾಲ ತಿರುವಳಿ ಮಾಡಿರುವ ರೈತರಿಗೆ ಹೊಸದಾಗಿ ಸಾಲ ವಿತರಿಸಲಾಗುತ್ತಿದೆ. ರೈತರು ಸಾಲದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ADVERTISEMENT

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್ ಉಲ್ಲಾ ಷರೀಫ್ ಮಾತನಾಡಿದರು.

ಸಂಘದ ಅಧ್ಯಕ್ಷ ರಂಗನಾಥ್, ಮೂಡಲಗಿರಿಯಪ್ಪ, ಕೆ.ಎಸ್.ರಂಗಸ್ವಾಮಿ ಉಪಸ್ಥಿತರಿದ್ದರು.

ಆರನಕಟ್ಟೆ ಗ್ರಾಮದಲ್ಲಿ ಸಾಲ ವಿತರಣೆ: ತಾಲ್ಲೂಕಿನ ಆರನಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಶಾಸಕ ಡಿ.ಸುಧಾಕರ್ ರೈತರಿಗೆ ಮರುಸಾಲದ ಚೆಕ್ ವಿತರಿಸಿದರು.

‘ಇಲ್ಲಿನ ಸಂಘದಲ್ಲಿ 723 ರೈತರು ಸಾಲ ಪಡೆದಿದ್ದು, ಉಳಿದ ರೈತರು ಕೃಷಿ ಚಟುವಟಿಕೆ ನಡೆಸಲು ಕಡಿಮೆ ಬಡ್ಡಿ ದರದ ಸಾಲ ಪಡೆಯುವಂತಾಗಬೇಕು. ಇಲ್ಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಶಾಸಕರು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್ ಉಲ್ಲಾ ಷರೀಫ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಗೀತಾನಾಗಕುಮಾರ್, ಸಿ.ಬಿ.ಪಾಪಣ್ಣ, ಬ್ಯಾಂಕಿನ ನಿರ್ದೇಶಕ ರಾಜು, ಸಂಘದ ಅಧ್ಯಕ್ಷ ವೇದಮೂರ್ತಿ, ಹೊನ್ನಯ್ಯ, ಶಿವಣ್ಣ, ಹಿಮಂತರಾಜು, ಎ.ಎಚ್.ತಾಂಬೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.