ADVERTISEMENT

ಸಿಲಿಂಡರ್‌ ವಿತರಣೆ ವಿಳಂಬ: ಗ್ರಾಹಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 9:50 IST
Last Updated 30 ಸೆಪ್ಟೆಂಬರ್ 2014, 9:50 IST

ಚಿಕ್ಕಜಾಜೂರು: ಸಿಲಿಂಡರ್‌ ವಿತರಣೆಯಲ್ಲಿ ವಿತರಕರ ವಿಳಂಬ ನೀತಿಯನ್ನು ವಿರೋಧಿಸಿ ಇಲ್ಲಿನ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳಲ್ಕೆರೆಯ ಅಖಿಲ್ ಇಂಡೇನ್‌ ಗ್ರಾಸ್‌ ವಿತರಕರು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಸಿಲಿಂಡರ್‌ ವಿತರಿಸುತ್ತಿಲ್ಲ ಎಂಬುದು ಗ್ರಾಹಕರ ಆರೋಪವಾಗಿದೆ.

ಗ್ರಾಹಕರು ಸಿಲಿಂಡರ್‌ ಪಡೆದ 25 ದಿನಗಳ ನಂತರ ಮತ್ತೊಂದು ಸಿಲಿಂಡರಿಗೆ ಬುಕ್‌ ಮಾಡಿ  ಮೊಬೈಲ್‌ಗೆ ಸ್ವೀಕೃತಿ ಮೆಸೇಜ್‌ ಬಂದಿದ್ದರೂ, ಎರಡನೇ ಸಿಲಿಂಡರ್‌ ಪಡೆಯಲು ವಾರದ ನಂತರ ಬಂದರೆ, ಬುಕ್‌ ಆಗಿಲ್ಲ, ಮುಂದಿನ ವಾರ ಬನ್ನಿ ಅಥವಾ ಕ್ಯಾನ್ಸಲ್‌ ಆಗಿದೆ, ಮತ್ತೊಮ್ಮೆ ಬುಕ್‌ ಮಾಡಿ ಎಂಬ ಸಬೂಬುಗಳನ್ನು ಹೇಳುತ್ತಾರೆ. ಅಕ್ಷರ ಜ್ಞಾನವಿಲ್ಲದವರು, ಮೊಬೈಲ್‌ ಬಳಕೆ ಗೊತ್ತಿಲ್ಲದವರಿಗೆ, ಮಹಿಳಾ ಗ್ರಾಹಕರಿಗೆ ಏಜೆನ್ಸಿ ಅವರಿಂದ ತೊಂದರೆ ಆಗುತ್ತಿದೆ ಎಂದು ಗ್ರಾಹಕರಾದ ಸುನಿಲ್‌, ಅಚ್ಯುತ, ಈಶ್ವರಪ್ಪ, ಗೀತಮ್ಮ, ಅನಸೂಯ, ಚಂದ್ರಮ್ಮ, ಬಿ.ದುರ್ಗ ಗ್ರಾಮದ ಕಿರಣ್‌, ಪ್ರಶಾಂತ್‌, ಬಸವರಾಜ್‌, ಚನ್ನಬಸಪ್ಪ, ಹಿರೇಕಂದವಾಡಿ ಗ್ರಾಮದ ಈಶ್ವರಪ್ಪ, ರಾಜಪ್ಪ, ಉಮೇಶ್‌, ಬಸವರಾಜ್‌ ಮೊದಲಾದ ನೂರಾರು ಗ್ರಾಹಕರು ಆರೋಪಿಸಿದ್ದಾರೆ.

ಮತ್ತೊಂದು ಏಜೆನ್ಸಿ ನೀಡುವಂತೆ ಒತ್ತಾಯ: ಸಿಲಿಂಡರ್‌ಗಳು ಬಂದ ಎಲ್ಲಾ ದಿನಗಳಲ್ಲೂ ವಿತರಣೆಗೆ ಬಂದ ಕೆಲಸಗಾರರಿಗೂ ಮತ್ತು ಗ್ರಾಹಕರ ನಡುವೆ ಜಗಳವಾಗುತ್ತಿದ್ದು, ಕೆಲವೊಮ್ಮೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆಯನ್ನು ನಿಯಂತ್ರಿಸಿದ ನಿದರ್ಶನಗಳು ನಡೆದಿವೆ.

ಆದ್ದರಿಂದ ತಾಲ್ಲೂಕಿಗೆ ಇನ್ನೊಂದು ಏಜೆನ್ಸಿಯನ್ನು ನೀಡಿದರೆ, ಸಿಲಿಂಡರ್‌ ವಿತರಣೆ ತ್ವರಿತವಾಗಿ ಆಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ಗ್ರಾಹಕರ ಅನುಕೂಲಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಿ. ದುರ್ಗ ಹೋಬಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.