ADVERTISEMENT

‘ಸೌಲಭ್ಯ ಪಡೆಯಲು ಆಧಾರ್ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:26 IST
Last Updated 24 ಮೇ 2017, 5:26 IST

ಚಿತ್ರದುರ್ಗ: ‘ಆಧಾರ್ ಎಂಬುದು ಗುರುತಿನ ಚೀಟಿ ಮಾತ್ರವಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸೌಲಭ್ಯ ಪಡೆಯುವುದಕ್ಕೆ ಬೇಕಾದ ಎಲ್ಲ ವರ್ಗದವರಿಗೂ ಅಗತ್ಯವಾದ ದಾಖಲೆಯಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಗಳೂರಿನ ಇ–ಆಡಳಿತ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಧಾರ್ ನೋಂದಣಿ, ಸೀಡಿಂಗ್ ಹಾಗೂ ಆಧಾರ್ ಸಂಬಂಧಿತ ಸೇವೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರ ಉದ್ಘಾಟಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ವೇತನ, ಬೆಳೆ ಪರಿಹಾರ, ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಯ ಎಲ್ಲ ಮಾಸಾಶನಗಳು, ರೇಷನ್ ಕಾರ್ಡ್, ಗ್ಯಾಸ್‌ಸಂಪರ್ಕ, ಉಚಿತ ಆರೋಗ್ಯ, ಶಿಕ್ಷಣ ಸೇವೆ ಪಡೆಯಲು ಆಧಾರ್ ಕಾರ್ಡ್ ಅಗತ್ಯ.

ADVERTISEMENT

ಹೀಗಾಗಿ ಮಗುವಿನಿಂದ ವಯೋವೃದ್ಧರವರೆಗೆ ಆಧಾರ್‌ಕಾರ್ಡ್ ವಿತರಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ನಗರ, ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ವಿವಿಧ ಏಜೆನ್ಸಿಗಳ ಮೂಲಕ ಆಧಾರ್ ಕೇಂದ್ರಗಳನ್ನು ತೆರೆದು, ಕಾರ್ಡ್ ನೋಂದಣಿ ಮತ್ತು ವಿತರಣೆ ಮಾಡಲಾಗುತ್ತಿದೆ. ಆಧಾರ್ ಕಾರ್ಡ್‌ ಮಾಡಿಸುವ ಕುರಿತು ಸಾಕಷ್ಟು ಪ್ರಚಾರ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಮೊದಲ ಬಾರಿಗೆ ಆಧಾರ್‌ಕಾರ್ಡ್ ಪಡೆಯಲು ಯಾವುದೇ ಶುಲ್ಕವಿಲ್ಲ. ತಿದ್ದುಪಡಿಗಳಿದ್ದಲ್ಲಿ ಮಾತ್ರ ₹25 ಕೊಡಬೇಕಾಗುತ್ತದೆ. ಆಧಾರ್‌ ಕಾರ್ಡ್ ಮಾಡಿಸದೇ ಇರುವವರು ಕೂಡಲೇ ಸಮೀಪದ ಆಧಾರ್ ಕೇಂದ್ರಗಳನ್ನು ಸಂಪರ್ಕಿಸಿ ಸ್ವವಿವರ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆಧಾರ್ ಕಾರ್ಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಉಷಾರಾಣಿ ಮಾತನಾಡಿ ‘ರಾಜ್ಯದಲ್ಲಿ 6  ಕೋಟಿಗೂ ಹೆಚ್ಚು ಜನರು ಆಧಾರ್ ನೋಂದಣಿ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ 16 ಲಕ್ಷ ಜನ ಆಧಾರ್‌ಕಾರ್ಡ್ ಹೊಂದಿದ್ದರೆ.  ಇದರಲ್ಲಿ ಶೇ 54 ರಷ್ಟು 0–5 ವರ್ಷದೊಳಗಿನ ಮಕ್ಕಳು ಹಾಗೂ ಉಳಿದ ಶೇ 46 ರಷು ಜನ ಎಲ್ಲಾ ವಯೋಮಾನದ ವರಾಗಿದ್ದಾರೆ’ ಎಂದು ಅಂಕಿ ಅಂಶ ನೀಡಿದರು.

ಆಧಾರ್‌ ಸಂಸ್ಥೆಯ ಅಧಿಕಾರಿ ರಘುವಂಶಿ ಕಾರ್ಯಾಗಾರದಲ್ಲಿ 2016ರ ಆಧಾರ್ ರೆಗ್ಯುಲೇಷನ್ ಕಾಯ್ದೆ ಮತ್ತು ಆಧಾರ್ ಕಾರ್ಡ್ ನೊಂದಣಿ, ತಿದ್ದುಪಡಿ, ಮತ್ತು ಎರಡೆರಡು ಆಧಾರ್ ಪಡೆದಿರುವ ವ್ಯಕ್ತಿಯ ವೈಯಕ್ತಿಕ ಗೌಪ್ಯ ಮಾಹಿತಿ ಬಹಿರಂಗದ ದೋಷಗಳ ಬಗ್ಗೆ ಮಾಹಿತಿ ನೀಡಿದರು. ‘ಆಧಾರ್‌ ಕಾರ್ಡ್‌ಗೆ ನೀಡುವ ಮಾಹಿತಿ ತುಂಬಾ ಗೌಪ್ಯವಾಗಿದ್ದು ಇದರ ದುರುಪಯೋಗಪಡಿಸಿದ ಅಧಿಕಾರಿಗಳಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು’  ಎಚ್ಚರಿಸಿದರು.

‘ಆಧಾರ್‌ ಕಾರ್ಡ್‌ನಲ್ಲಿ ಬೇರೆ ಎಲ್ಲಾ ಗುರುತಿನ ಚೀಟಿಗಳಿಗಿಂತ ವಿಶೇಷವಾಗಿ ಬಯೋಮೆಟ್ರಿಕ್ ಮತ್ತು ಕಣ್ಣಿನ ಸ್ಕ್ಯಾನರ್ ಮುಖ್ಯವಾಗಿದೆ. ಹಾಗಾಗಿ ಆಧಾರ್‌ ಕಾರ್ಡ್ ಬೇರೆ ಎಲ್ಲಾ ಗುರುತಿನ ಚೀಟಿಗಳಿಗಿಂತ ವಿಶೇಷವಾಗಿದೆ. ಇದನ್ನು ಎರಡು ಬಾರಿ ಪಡೆಯಲು ಸಾಧ್ಯವಿಲ್ಲ. ಆದರೆ, ಹೆಸರು, ವಿಳಾಸಗಳನ್ನು ಬದಲಾಯಿಸಲು ಅವಕಾಶವಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.