ADVERTISEMENT

‘ಹಸಿರೀಕರಣಕ್ಕೆ ಜನ್ಮದಿನ ನಾಂದಿಯಾಗಲಿ’

ಕಾದಂಬರಿಕಾರ ತ.ರಾ.ಸು 97ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:16 IST
Last Updated 22 ಏಪ್ರಿಲ್ 2017, 4:16 IST
ನಾಯಕನಹಟ್ಟಿ: ‘ಮಹನೀಯರ ಜಯಂತಿ ಆಚರಣೆಯ ವೇಳೆ ಅವರ ಸ್ಮರಣೆಗೆ ಸಾರ್ವಜನಿಕರು ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಕೈಜೋಡಿಸಬೇಕು’ ಎಂದು ನಿವೃತ್ತ ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಹೇಳಿದರು.
 
ತಳಕು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಳಕಿನ ರಾಮಸ್ವಾಮಿ ಸುಬ್ಬರಾಯ (ತ.ರಾ.ಸು) ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ರಾಜ್ಯದಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳು ಬರಪೀಡಿತ ಎಂಬ ಶಾಶ್ವತ ಹಣೆಪಟ್ಟಿ ಹೊಂದಿವೆ. ಈ ಪ್ರದೇಶದಲ್ಲಿ ಹಸಿರು ಹೊದಿಕೆ ನಿರ್ಮಾಣವಾಗಬೇಕು. ಆಗ ಮಾತ್ರ ಮಳೆಯ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.

ಬೀಜದ ಉಂಡೆ ಎನ್ನುವ ಮಾದರಿಯನ್ನು ಜೋಗಿಮಟ್ಟಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಮುಂಗಾರಿನ ಪ್ರಥಮ ಮಳೆಯಲ್ಲಿ ಬೀಜಗಳನ್ನು ಚೆಲ್ಲಿ ಗಿಡಗಳು ಬೆಳೆಯವುದಕ್ಕೆ ಮುಂದಾಗಬೇಕು’ ಎಂದು ಹೇಳಿದರು.
 
‘ದೊಡ್ಡ ಪ್ರಮಾಣದಲ್ಲಿ ಹಸಿರೀಕರಣವಾದರೆ ಮಾತ್ರ ಮಳೆಯ ಪ್ರಮಾಣ ಹೆಚ್ಚಾಗುತ್ತದೆ. ಬತ್ತಿಹೋದ ಹಳ್ಳ ಕೊಳ್ಳಗಳಲ್ಲಿ ನೀರು ಹರಿಯಲು ಸಾಧ್ಯವಿದೆ. ರೈತರು ಕಾಲುವೆ ನಿರ್ಮಿಸಿ ನೀರು ಹರಿಸುವಂತೆ ಸರ್ಕಾರದ ವಿರುದ್ಧ ಹೋರಾಡುವ ಬದಲು ಮರಗಿಡಗಳ ಪ್ರಮಾಣ ಹೆಚ್ಚಿಸಿದರೆ ತನ್ನಷ್ಟಕ್ಕೆ ತಾನೇ ಮಳೆ 
ಹೆಚ್ಚಾಗಿ ನೀರು ಸಿಗುತ್ತದೆ. 
 
ಪ್ರತಿ ಮಳೆಗಾಲದಲ್ಲೂ ಮಳೆನೀರನ್ನು ಸಂಗ್ರಹಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು. ರೈತ ಮುಖಂಡ ಓಬಣ್ಣ ಮಾತನಾಡಿ, ‘ತಳಕು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ತ.ರಾ.ಸು, ಟಿ.ಎಸ್.ವೆಂಕಣ್ಣಯ್ಯ ಹಾಗೂ ತ.ಸು.ಶಾಮರಾಯರ ಪುತ್ಥಳಿಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ.

ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಇವರ ಪ್ರತಿಮೆಗಳನ್ನು ಸ್ಥಾಪಿಸಬೇಕು. ಶ್ರೇಷ್ಠ ಸಾಹಿತಿಗಳ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಪ್ರಯತ್ನ ನಡೆಸಬೇಕು’ ಎಂದು ಒತ್ತಾಯಿಸಿದರು.    
 
ಕಾರ್ಯಕ್ರಮದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ್, ತ.ರಾ.ಸು ಸಹೋದರ ಮಧುರನಾಥ್, ಗ್ರಾಮ ಪಂಚಾಯ್ತಿ ಸದಸ್ಯ ಬಿ.ಟಿ.
ಪಾಲನಾಯಕ, ಶಿಕ್ಷಕರಾದ ಮಹಾಂತೇಶ್, ಲೋಕೇಶ್, ಜಿ.ಟಿ.ತಿಪ್ಪೇಸ್ವಾಮಿ, ಪಿಡಿಒ ಜಯಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಉಪಾಧ್ಯಕ್ಷ ಮಹಾದೇವಣ್ಣ, ಕೋಶಾಧ್ಯಕ್ಷ ಸಿ.ಲೋಕೇಶ್, ಶಿಕ್ಷಕ ಶ್ರೀಕಾಂತ್, ಬೊಮ್ಮಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.