ADVERTISEMENT

ಹೊಳಲ್ಕೆರೆ: ₹ 10.3 ಕೋಟಿ ಆದಾಯ ನಿರೀಕ್ಷೆ

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ, ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:30 IST
Last Updated 18 ಫೆಬ್ರುವರಿ 2017, 5:30 IST
ಹೊಳಲ್ಕೆರೆ: ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ₹ 16.15 ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಯಿತು.ಪಾರಂಭಿಕ ಶಿಲ್ಕು ₹ 6.02 ಕೋಟಿ ಇದ್ದು, ನಿರೀಕ್ಷಿತ ಆದಾಯ ₹10.13 ಕೋಟಿ  ಹಣ ಸಂಗ್ರಹದ ಗುರಿ ಹೊಂದಲಾಗಿದೆ. ಒಟ್ಟು ₹16.15 ಕೋಟಿಯಲ್ಲಿ ₹ 15.8 ಕೋಟಿ ವೆಚ್ಚ ಮಾಡುವ ಯೋಜನೆ ರೂಪಿಸಿದ್ದು, ₹ 35 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಯಿತು.
 
ಈಗಾಗಲೇ ಪಟ್ಟಣ ಪಂಚಾಯ್ತಿಯಲ್ಲಿ ವಾಣಿಜ್ಯ ಮಳಿಗೆ ಠೇವಣಿ ₹ 3.52 ಕೋಟಿ, ಕಚೇರಿ ಕಟ್ಟಡ ನಿರ್ಮಾಣದ ಹಣ ₹ 1 ಕೋಟಿ, ಬ್ಯಾಂಕ್‌ನಲ್ಲಿ ₹ 1.5 ಕೋಟಿ ಸೇರಿ ಒಟ್ಟು ₹ 6.02 ಕೋಟಿ ಹಣ ಇದೆ.
 
ಸ್ವಯಂಘೋಷಿತ ಆಸ್ತಿ ತೆರಿಗೆ, ನೀರಿನ ಕಂದಾಯ, ಉದ್ದಿಮೆ ಪರವಾನಗಿ, ಎಸ್‌ಎಫ್‌ಸಿ ಮುಕ್ತನಿಧಿ, ಕುಡಿಯುವ ನೀರಿನ ಅನುದಾನ, ಸಿಬ್ಬಂದಿ ವೇತನ, ವಿದ್ಯುತ್‌ ಅನುದಾನ, ಉದ್ಯಾನವನ ಅಭಿವೃದ್ಧಿ ಶುಲ್ಕ, ವಾಣಿಜ್ಯ ಮಳಿಗೆ ಬಾಡಿಗೆ, 14ನೇ ಹಣಕಾಸು, ನಗರೋತ್ಥಾನ ಮೂರನೇ ಹಂತದ ಅನುದಾನಗಳು, ರಾಜೀವ್‌ಗಾಂಧಿ ವಸತಿ ನಿಗಮದ ಭೂಮಿ ಖರೀದಿ ಅನದಾನ, ಇತರೇ ಅನುದಾನಗಳು ಸೇರಿ ಒಟ್ಟು ₹ 10.13 ಕೋಟಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ. 
 
ಇದರಲ್ಲಿ ಸಿಬ್ಬಂದಿ ವೇತನ, ಹೊರಗುತ್ತಿಗೆ ಸಿಬ್ಬಂದಿ ವೆಚ್ಚ, ಬೀದಿ ದೀಪ, ಪಂಪ್‌, ಮೋಟಾರ್‌, ವಿದ್ಯುತ್‌ ವೆಚ್ಚಗಳು, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ, ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾ ಪ್ರೋತ್ಸಾಹಧನ, ಪೌರ ಕಾರ್ಮಿಕರಿಗೆ ಸಮವಸ್ತ್ರ ಖರೀದಿ, ಬೀದಿ ದೀಪ, ನೀರು ಸರಬರಾಜು ಸಾಮಗ್ರಿ ಖರೀದಿ, ಪೌರಕಾರ್ಮಿಕರು, ನೀರು ಸರಬರಾಜು ಆರೋಗ್ಯ ತಪಾಸಣೆ, ಸರ್ಕಾರದ ತೆರಿಗೆ, ಸ್ವಚ್ಛ ಭಾರತ್‌ ಮಿಷನ್‌ ಬಗ್ಗೆ ಜಾಗೃತಿ ಮೂಡಿಸುವುದು, ಶೌಚಾಲಯ ನಿರ್ಮಾಣ, ವಕೀಲರ ಭವನಕ್ಕೆ ಪುಸ್ತಕ ಖರೀದಿ, ಪತ್ರಕರ್ತರ ಭವನಕ್ಕೆ ಪೀಠೋಪಕರಣ ಖರೀದಿ, ಮಹಿಳೆಯರಿಗೆ ತರಬೇತಿ, ನೈರ್ಮಲ್ಯಕ್ಕೆ ಸಂಬಂಧಿಸಿದ ಕ್ರಿಮಿನಾಶಕಗಳ ಖರೀದಿಗೆ ಒಟ್ಟು ₹ 3.84 ಕೋಟಿ ಹಣ ಮೀಸಲಿಡಲಾಗಿದೆ.
 
ಕಚೇರಿ ಕಟ್ಟಡ, ವಾಣಿಜ್ಯ ಮಳಿಗೆ, ಆಶ್ರಯ, ಅಂಬೇಡ್ಕರ್‌ ಮನೆ, ರಸ್ತೆ, ಚರಂಡಿ ನಿರ್ಮಾಣ, ಆಶ್ರಯ ಮನೆ ನಿರ್ಮಾಣಕ್ಕೆ ಭೂಮಿ ಖರೀದಿ, ಸಿಎಫ್‌ಎಲ್‌ ಬಲ್ಬ್‌ ಖರೀದಿ, ಶುದ್ಧ ನೀರಿನ ಘಟಕ, 10 ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ, ಹೈಮಾಸ್ಟ್‌ ದೀಪ, ಘನತ್ಯಾಜ್ಯ ವಿಲೇವಾರಿ ಕಸದಬುಟ್ಟಿ ಖರೀದಿ, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವುದು, ಪರಿಶಿಷ್ಟರು, ಹಿಂದುಳಿದವರು, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು, ಸಮುದಾಯ ಭವನ, ಹಾಸ್ಟೆಲ್‌ಗಳಿಗೆ ಸಾಮಗ್ರಿ ವಿತರಣೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಾಹನ ಖರೀದಿಗಳಿಗೆ ₹ 11.96 ಕೋಟಿ ತೆಗೆದಿಡಲಾಗಿದೆ.
 
ಶುದ್ಧ ನೀರಿಗೆ ₹ 2 ನಿಗದಿಪಡಿಸಿ:  ಪಟ್ಟಣದಲ್ಲಿರುವ ಶುದ್ಧ ನೀರಿನ ಘಟಕಗಳಲ್ಲಿ ಒಂದು ಕ್ಯಾನ್‌ ನೀರಿಗೆ ₹ 5 ಮೌಲ್ಯದ ಹೊಸ ನಾಣ್ಯ ಹಾಕಬೇಕು. ಗ್ರಾಮೀಣ ಭಾಗದಲ್ಲಿ ₹ 2ಕ್ಕೆ 20 ಲೀಟರ್‌ ನೀರು ಸಿಗುತ್ತಿದ್ದು, ಇಲ್ಲಿಯೂ ₹ 2ಕ್ಕೆ ಇಳಿಸಿ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ.ರಮೇಶ್‌ ಆಗ್ರಹಿಸಿದರು. 
 
ಸರ್ಕಾರದ ಹಣದಲ್ಲಿ ನೀರಿನ ಘಟಕ ಸ್ಥಾಪಿಸಿದ್ದು, ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಅವರಿಗೆ ತಿಂಗಳಿಗೆ ₹ 1.75 ಲಕ್ಷ ಹಣ ಸಂಗ್ರಹ ಆಗುತ್ತದೆ. ಸರ್ಕಾರ ಶುದ್ಧ ನೀರಿನ ಘಟಕ ಆರಂಭಿಸಿರುವುದು ಜನರಿಗೆ ಅನುಕೂಲ ಆಗಲಿ ಎಂದೇ ಹೊರತು ಖಾಸಗಿ
ಯವರು ಹಣ ಮಾಡಿಕೊಳ್ಳಲು ಅಲ್ಲ. ಮೊದಲು ನೀರಿನ ಘಟಕಗಳನ್ನು ಪಟ್ಟಣ ಪಂಚಾಯ್ತಿ ವಶಕ್ಕೆ ತೆಗೆದುಕೊಳ್ಳಿ. ಇಲ್ಲವಾದಲ್ಲಿ ನೀರಿನ ಘಟಕಗಳಿಗೆ ಬೀಗ ಹಾಕುತ್ತೇವೆ ಎಂದು ಕೆಸಿಆರ್‌ ಎಚ್ಚರಿಸಿದರು.
 
ಹಾಸ್ಟೆಲ್ ಕಾಮಗಾರಿ ಪ್ರತಿಧ್ವನಿ: ‘ಬಂಡಿಚಿಕ್ಕಮ್ಮ ದೇವಾಲಯದ ಹತ್ತಿರದ ಕೆರೆಯಲ್ಲಿ ಹಾಸ್ಟೆಲ್‌ ನಿರ್ಮಿಸುತ್ತಿದ್ದು, ರೈತರಿಗೆ ತೊಂದರೆ ಆಗಿದೆ. ತಕ್ಷಣವೇ ಕಾಮಗಾರಿ ನಿಲ್ಲಿಸಿ’ ಎಂದು ಸದಸ್ಯ ಇಂದುಧರ ಮೂರ್ತಿ ಏರುದನಿಯಲ್ಲಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಡಿ.ಉಮೇಶ್‌, ‘ನಿಮ್ಮ ಕೋರಿಕೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದರು.
 
ಅಧ್ಯಕ್ಷರ ಕೊಠಡಿಗೆ ಬೀಗ: ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಕೊಠಡಿಗೆ ಸದಾ ಬೀಗ ಹಾಕಿರುತ್ತಾರೆ. ಇದು ಆ ಸ್ಥಾನಕ್ಕೆ ಶೋಭೆ ತರವುದಿಲ್ಲ. ಅಧ್ಯಕ್ಷರು ಬರಲಿ, ಬಿಡಲಿ ನಿತ್ಯ ಕೊಠಡಿಯ ಬೀಗ ತೆಗೆದಿರಬೇಕು’ ಎಂದು ಸದಸ್ಯೆ ಸವಿತಾ ನರಸಿಂಹ ಖಾಟ್ರೋತ್‌ ಹೇಳಿದರು. 
 
‘ಕಾಮಗಾರಿಗಳ ಬಗ್ಗೆ ಆಯಾ ವಾರ್ಡ್‌ನ ಸದಸ್ಯರಿಗೆ ಮಾಹಿತಿ ಕೊಡಬೇಕು. ಎಲ್ಲಾ ಜಾತಿಗಳ ಸಂಘ, ಸಂಸ್ಥೆಗಳಿಗೆ ನಿವೇಶನ ಮಂಜೂರು ಮಾಡಬೇಕು. ಆಶ್ರಯ ಮನೆಯ ಫಲಾನುಭವಿಗಳಿಗೆ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದ ರೋಸಿಹೋದ ಬಡವರು ಸರ್ಕಾರಿ ಸೌಲಭ್ಯಗಳೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಜಾರಾಗಿದ್ದಾರೆ’ ಎಂದರು.
 
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ರಾಜಪ್ಪ, ಶಾರದಮ್ಮ ರುದ್ರಪ್ಪ, ಚಂದ್ರಕಲಾ ಪ್ರಕಾಶ್‌, ಗುರಸ್ವಾಮಿ, ತಿಪ್ಪೇಸ್ವಾಮಿ, ಮುರುಗೇಶ್‌, ಸಜಿಲ್‌, ಅಲ್ಲಾ ಭಕ್ಷ್‌, ಖಾದರ್‌, ಸಯ್ಯದ್‌ ಸಯೀದ್‌ ಇದ್ದರು. 
 
* ಪ.ಪಂ.ಸದಸ್ಯರು ತಮ್ಮ ವಾರ್ಡ್‌ನಲ್ಲಿ ಶೌಚಾಲಯ ಹೊಂದಿಲ್ಲದ ಕುಟುಂಬದವರ ಮನವೊಲಿಸಿ ಶೌಚಾಲಯ ಕಟ್ಟಿಸಿಕೊಳ್ಳಲು ಪ್ರೇರೇಪಿಸಬೇಕು.
- ಡಿ.ಉಮೇಶ್‌, ಪ.ಪಂ.ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.