ADVERTISEMENT

ಹೊಸದುರ್ಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:52 IST
Last Updated 16 ಜನವರಿ 2017, 4:52 IST
ಹೊಸದುರ್ಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ
ಹೊಸದುರ್ಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ   

ಹೊಸದುರ್ಗ: ‘ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ತಾಲ್ಲೂಕಿನ ಮತ್ತೋಡಿನಲ್ಲಿ ಭಾನುವಾರ ನಡೆದ ಹೋಬಳಿ ಮಟ್ಟದ ‘ಕಾಂಗ್ರೆಸ್‌ ನಡಿಗೆ ಸುರಾಜ್ಯದ ಕಡೆಗೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಎಸ್‌ಸಿ, ಎಸ್‌ಟಿ ಸಮುದಾಯ ಭವನಕ್ಕೆ ₹ 5.70 ಕೋಟಿ, ವೇದಾವತಿ ನದಿ ಸಮೀಪದ ಕೆಲೋಡು, ಕಾರೇಹಳ್ಳಿ ಸಮೀಪದ ಹರಿಹರೇಶ್ವರ ದೇವಸ್ಥಾನದ ಬಳಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ ₹18 ಕೋಟಿ, ನೀರಗುಂದ ಹಾಗೂ ಮಾಡದಕೆರೆ ಬಳಿ ವಿದ್ಯುತ್ ಸರಬರಾಜು ಉಪವಿಭಾಗ ಸ್ಥಾಪಿಸಲು ₹ 18.13 ಕೋಟಿ, ನಾಯಿಗೆರೆ, ಗುಡ್ಡದನೇರಲಕೆರೆ, ಮಾಡದಕೆರೆ, ಮಾಳಪ್ಪನಹಳ್ಳಿ ಗೇಟ್ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ₹ 60 ಕೋಟಿ ಬಿಡುಗಡೆ ಯಾಗಿದ್ದು ಜನವರಿ ಅಂತ್ಯದೊಳಗೆ ಸಚಿವರನ್ನು ಕರೆಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಧರ್ಮ, ಜಾತಿ ಭೇದವಿಲ್ಲದೆ ಎಲ್ಲಾ ವರ್ಗದ ಅಭಿವೃದ್ಧಿಗಾಗಿ  ಜನಪರ ಯೋಜನೆ ಜಾರಿಗೊಳಿಸಿದೆ. ಆದರೆ, ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಇಲ್ಲದೇ ₹1,000, ₹ 500 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಸರಿಯಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತ ವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್‌ ಮಾತನಾಡಿ, ‘ರಾಜ್ಯಕ್ಕೆ ಮಾದರಿಯಾಗುವಂತಹ ಜವಳಿ ಉದ್ಯಮ ಹಾಗೂ ಪಾರ್ಕ್‌ ನಿರ್ಮಿಸಲು ತಾಲ್ಲೂಕಿನ ಅರಳಿಹಳ್ಳಿ ಸಮೀಪ ಅತಿಕ್ರಮವಾಗಿದ್ದ 25 ಎಕರೆ ಹಾಗೂ ಹೊಸದುರ್ಗ ಹೊರವಲಯದ ಹಿರಿ ಯೂರು ರಸ್ತೆಯಲ್ಲಿ ಅತಿಕ್ರಮ ವಾಗಿದ್ದ 8 ಎಕರೆ ಜಮೀನನ್ನು ಗುರುತಿಸಲಾಗಿದೆ. ಒಟ್ಟು 33 ಎಕರೆ ಜಮೀನಿನಲ್ಲಿ ₹ 10 ಕೋಟಿಗೂ ಅಧಿಕ ವೆಚ್ಚದಲ್ಲಿ ಬೃಹತ್‌ ಜವಳಿ ಉದ್ಯಮ ಹಾಗೂ ಪಾರ್ಕ್‌ ನಿರ್ಮಿಸಲು ಯೋಜನೆ ರೂಪಿಸಲಾಗುವುದು’ ಎಂದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 12 ಅಧಿಕ ಮಂದಿ ತಜ್ಞ ವೈದ್ಯರು ಪಾಲ್ಗೊಂಡಿದ್ದರು. ಮತ್ತೋಡು ಹೋಬಳಿ ವ್ಯಾಪ್ತಿಯ ಸಾವಿರಾರು ಮಂದಿ ಉಪಯೋಗ ಪಡೆದುಕೊಂಡರು.  ಜಿಲ್ಲಾ ಪಂಚಾಯ್ತಿ ಸದಸ್ಯರಾದ ಚೇತನಾ ಪ್ರಸಾದ್‌, ವಿಜಯಲಕ್ಷ್ಮಿ ಪ್ರಕಾಶ್‌, ವಿಶಾಲಾಕ್ಷಿ ನಟರಾಜು, ಕೆ.ಅನಂತ, ಮಮತಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ ಗಿರೀಶ್‌, ಉಪಾಧ್ಯಕ್ಷೆ ನೇತ್ರಾವತಿ ದೇವರಾಜು, ಸದಸ್ಯರಾದ ನಿರಂಜನ್‌, ಪ್ರೇಮಾ ರವೀಂದ್ರ, ಮುಖಂಡರಾದ ಆರ್‌. ತಮ್ಮಣ್ಣ, ಕೆ.ಸಿ.ನಿಂಗಪ್ಪ, ರಾಜಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.