ADVERTISEMENT

‘ಕೊಟ್ಟಿಗೆ ಗೊಬ್ಬರದಿಂದ ರೋಗ ನಿಯಂತ್ರಣ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:03 IST
Last Updated 4 ಸೆಪ್ಟೆಂಬರ್ 2015, 10:03 IST

ಹೊಸದುರ್ಗ: ವಿವಿಧ ತೋಟಗಾರಿಕಾ ಬೆಳೆಗಳ ರೋಗ ನಿಯಂತ್ರಣಕ್ಕೆ ಕೊಟ್ಟಿಗೆ ಗೊಬ್ಬರ ಬಳಸುವುದು ಅಗತ್ಯ ಎಂದು ಹೊಸದುರ್ಗ ತೋಟಗಾರಿಕಾ ಇಲಾಖೆ ನಿರ್ದೇಶಕ ಎನ್‌.ಪ್ರಸನ್ನ ರೈತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಶ್ರೀರಾಂಪುರ ಹೋಬಳಿ ಹೆಗ್ಗೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಈಚೆಗೆ ನಡೆದ ಹೈನುಗಾರಿಕಾ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ತೋಟಗಾರಿಕಾ ಬೆಳೆಗಳಿಗೆ ತಗಲುವ ವಿಭಿನ್ನ ಬಗೆಯ ರೋಗಗಳ ನಿಯಂತ್ರಣಕ್ಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕು. ಇಲಾಖೆಯ ಜತೆಗೆ, ನಿರಂತರವಾಗಿ ಸಂಪರ್ಕದಲ್ಲಿ ಇರಬೇಕು. ತೆಂಗು ಕೃಷಿ ಮತ್ತು ಇನ್ನಿತರ ಲಾಭದಾಯಕ ತೋಟಗಾರಿಕಾ ಬೆಳೆಗಳಿಗೆ ಇಲಾಖೆಯಲ್ಲಿ ಸಿಗುವ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಗಣೇಶ್ ಮಾತನಾಡಿ, ವಿಜ್ಞಾನ ಬೆಳೆದಂತೆ  ನಮ್ಮ ಆರೋಗ್ಯವು ವಿಷಪೂರಿತವಾಗುತ್ತಿದೆ. ನಾವು ತಿನ್ನುವ ಆಹಾರ ಬೆಳೆಗಳು ಆರೋಗ್ಯದಾಯ ಆಗಿರಬೇಕಾದರೆ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಬೇಕು. ಮಳೆಗಾಲ ಕಡಿಮೆ ಆಗಿರುವುದರಿಂದ ರೈತರು ಕೃಷಿ ಚಟುವಟಿಕೆ ಜತೆಗೆ, ಹೈನುಗಾರಿಕೆಯನ್ನು ಹೆಚ್ಚು ಮಾಡಬೇಕಿದೆ. ಇದರಿಂದ ರೈತರು ಸ್ವಾವಲಂಬನೆಯ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಹಿರಿಯೂರಿನ ಬಬ್ಬರೂ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಓಂಕಾರಪ್ಪ ಮಾತನಾಡಿ, ತೆಂಗು ಅಭಿವೃದ್ಧಿ ಆಗಬೇಕಾದರೆ ದನಕರು ಇರಬೇಕು. ಇವುಗಳ ಗೊಬ್ಬರದಿಂದ ತೆಂಗು ಕೃಷಿಗೆ ಬರುವ ರೋಗಗಳನ್ನು ತಡೆಗಟ್ಟಬಹುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಪ್ರೇಮಾನಂದ್, ಪಶುವೈದ್ಯ ಶಿವಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಕಮಲಮ್ಮ, ವೀರಣ್ಣ, ಮಹೇಂದ್ರಪ್ಪ, ರಾಜೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.