ADVERTISEMENT

22 ಕೇಂದ್ರಗಳಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆ

ಪರೀಕ್ಷೆ ಬರೆದ ಏಳು ಸಾವಿರಕ್ಕೂ ಅಧಿಕ ಡಿಇಡಿ, ಬಿಇಡಿ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:56 IST
Last Updated 16 ಜನವರಿ 2017, 4:56 IST
ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ತೆರೆಯಲಾಗಿದ್ದ ಟಿಇಟಿ ಪರೀಕ್ಷಾ ಕೇಂದ್ರದ ಎದುರಿನ ಹಳೆಯ ಮಾರುಕಟ್ಟೆ ಪೌಳಿಯಲ್ಲಿ ಭಾನುವಾರ ಅಧ್ಯಯನ ನಿರತರಾಗಿರುವ ಅಭ್ಯರ್ಥಿಗಳು.
ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ತೆರೆಯಲಾಗಿದ್ದ ಟಿಇಟಿ ಪರೀಕ್ಷಾ ಕೇಂದ್ರದ ಎದುರಿನ ಹಳೆಯ ಮಾರುಕಟ್ಟೆ ಪೌಳಿಯಲ್ಲಿ ಭಾನುವಾರ ಅಧ್ಯಯನ ನಿರತರಾಗಿರುವ ಅಭ್ಯರ್ಥಿಗಳು.   

ಚಿತ್ರದುರ್ಗ: ಜಿಲ್ಲೆಯಲ್ಲಿ ಈ ವರ್ಷ ಎರಡು ಹಂತಗಳಲ್ಲಿ ನಗರದ 22 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಸ್ತುವಾರಿಯಲ್ಲಿ ನಡೆಯಿತು.
ಬೆಳಿಗ್ಗೆ 9.30ಯಿಂದ ಮಧ್ಯಾಹ್ನ 12.30ವರೆಗೆ ಡಿ.ಇಡಿ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಮೊದಲ ಹಂತದಲ್ಲಿ 4257 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು.

4026 ಅಭ್ಯರ್ಥಿಗಳು ಹಾಜರಾಗಿದ್ದರು. 231 ಮಂದಿ ಗೈರಾಗಿದ್ದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೇಂಟ್ ಜೋಸೆಫ್ ಕಾನ್ವೆಂಟ್, ಚಿನ್ಮೂಲಾದ್ರಿ, ಬಾಪೂಜಿ, ಎಸ್‌ಜೆಎಂ ಇಂಗ್ಲಿಷ್ ಶಾಲೆ, ಮಹಾರಾಣಿ ಪಿಯು ಕಾಲೇಜು, ವಿದ್ಯಾವಿಕಾಸ ಶಾಲೆ, ಡಾನ್ ಬಾಸ್ಕೊ ಮತ್ತು ವಾಸವಿ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಬಾಲಕ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  500ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದರು. ವಾಸವಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 7ಗಂಟೆಯಿಂದಲೇ ಅಭ್ಯರ್ಥಿಗಳು ಬಂದರು. ಬೆಳಗಿನ ಮಾರುಕಟ  ಗದ್ದಲದಿಂದಾಗಿ ಕೊನೆ ಕ್ಷಣದವರೆಗೂ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಅಭ್ಯರ್ಥಿಗಳಿಗೆ  ವಾತಾವರಣ ಕಿರಿಕಿರಿ ಉಂಟು ಮಾಡಿತು.

ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾದ ನಂತರ ಅಭ್ಯರ್ಥಿಗಳು ಪಕ್ಕದಲ್ಲಿದ್ದ ಪೌಳಿಯಲ್ಲಿ ಕುಳಿತು ಓದಿ ಮನನ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಅಭ್ಯರ್ಥಿಗಳು ಪರಸ್ಪರ ವಿಷಯ ವಿನಿಮಯ ಮಾಡಿಕೊಂಡರು. ಅಂಗಳದಲ್ಲಿ ದುರ್ವಾಸನೆ ನಡುವೆಯೂ ವಿದ್ಯಾರ್ಥಿಗಳ ಅಧ್ಯಯನ ಮುಂದುವರಿದಿತ್ತು.

ಮಧ್ಯಾಹ್ನ 2 ಗಂಟೆಯಿಂದ 4.30ವರೆಗೆ ನಡೆದ ಡಿಇಡಿ, ಬಿಇಡಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ 7025 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
6667 ಅಭ್ಯರ್ಥಿಗಳು ಹಾಜರಾಗಿದ್ದರು. 358 ಮಂದಿ ಗೈರು ಹಾಜರಾಗಿದ್ದರು.

ಬೆಳಗಿನ ಅವಧಿಗೆ ತೆರೆದಿದ್ದ 10 ಕೇಂದ್ರಗಳು ಸೇರಿದಂತೆ 22 ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಯಿತು. ಅಮೃತ್ ಆಯುರ್ವೇದಿಕ್ ಕಾಲೇಜು, ಹೊರಪೇಟೆಯ ನ್ಯಾಷನಲ್ ಹೈಸ್ಕೂಲ್, ಮದಕರಿ ನಾಯಕ ಹೈಸ್ಕೂಲ್, ಕಬೀರನಾಂದ ಹೈಸ್ಕೂಲ್, ರೋಟರಿ ಶಾಲೆ ಸೇರಿದಂತೆ ನಗರದ ಹಲವು ಶಾಲೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.