ADVERTISEMENT

3 ಸಾವಿರ ಕಾರ್ಯಕರ್ತರ ಸಮಿತಿ ರಚನೆಗೆ ಶಾಸಕ ತಿಪ್ಪಾರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 7:02 IST
Last Updated 27 ನವೆಂಬರ್ 2017, 7:02 IST
ಚಿತ್ರದುರ್ಗದಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬೂತ್ ಸಶಕ್ತೀಕರಣ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು
ಚಿತ್ರದುರ್ಗದಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬೂತ್ ಸಶಕ್ತೀಕರಣ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು   

ಚಿತ್ರದುರ್ಗ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ನಡೆಸಬೇಕು’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ಇಲ್ಲಿನ ಕ್ರೀಡಾಭವನದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬೂತ್ ಸಶಕ್ತೀಕರಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 275 ಬೂತ್‌ಗಳಿವೆ. ಹೀಗಾಗಿ ಮೂರು ಸಾವಿರ ಮಂದಿಯನ್ನೊಳಗೊಂಡ ಸಮಿತಿ ರಚಿಸೋಣ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕೆಲಸಗಳನ್ನು ಕಾರ್ಯಕರ್ತರು ಈಗಿನಿಂದಲೇ ಮನೆ ಮನೆಗೆ ಹೋಗಿ ತಿಳಿಸಲು ಮುಂದಾಗಬೇಕು. ವಿಧಾನಸಭೆ ಚುನಾವಣೆ ಅಷ್ಟೇ ಅಲ್ಲದೆ, ನಗರಸಭೆ ಚುನಾವಣೆಗೂ ಈ ಬಾರಿ ವಿಶೇಷ ಗಮನ ಹರಿಸುವ ಮೂಲಕ ಅಲ್ಲಿಯೂ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದು ಹೇಳಿದರು.

ADVERTISEMENT

ಕ್ರಿಮಿನಲ್ ಪ್ರಕರಣ; ಶಾಸಕರ ತಿರುಗೇಟು: ‘ಈಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನನ್ನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಕೆಲವು ಸದಸ್ಯರು ಚರ್ಚಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬರವಿದ್ದಾಗ ಟ್ರ್ಯಾಕ್ಟರ್‌ಗಳ ಮೂಲಕ ನೀರು ಸರಬರಾಜು ಮಾಡಿ ಕೋಟಿಗಟ್ಟಲೆ ಬೋಗಸ್ ಬಿಲ್ ಮಾಡಿರುವವರ ವಿರುದ್ಧ ಮೊದಲು ಕ್ರಿಮಿನಲ್ ಪ್ರಕರಣ ದಾಖಲಿಸಲಿ’ ಎಂದು ಶಾಸಕರು ತಿರುಗೇಟು ನೀಡಿದರು.

ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್, ‘ಮೂರು ಬೂತ್‌ಗಳಿಗೆ ಒಬ್ಬ ಪ್ರಮುಖರನ್ನು ನೇಮಿಸಿ ಗ್ರಾಮಾಂತರದಲ್ಲಿರುವ 147 ಹಾಗೂ ನಗರದಲ್ಲಿರುವ 113ಬೂತ್‌ಗಳನ್ನು ಸಶಕ್ತೀಕರಣಗೊಳಿಸಬೇಕು. ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷವನ್ನು ಸಂಘಟಿಸಬೇಕು’ ಎಂದು ತಿಳಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಆಕಾಂಕ್ಷಿ ಡಾ.ಎಸ್.ಲೇಪಾಕ್ಷಿ, ಬಿಜೆಪಿ ನಗರಮಂಡಲ ಅಧ್ಯಕ್ಷ ಪಿ.ಲೀಲಾಧರ ಠಾಕೂರ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ಗ್ರಾಮಾಂತರ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಾಗರಾಜ್ ಬೇಂದ್ರೆ ಇದ್ದರು. ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.