ADVERTISEMENT

ಹೆಣ್ಣು–ಗಂಡು ತಾರತಮ್ಯ ಸಲ್ಲದು

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 12:22 IST
Last Updated 5 ಜುಲೈ 2018, 12:22 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು   

ಚಿತ್ರದುರ್ಗ: ಹೆಣ್ಣು ಕನಿಷ್ಠ ಗಂಡು ಶ್ರೇಷ್ಠ ಎಂಬ ತಾರತಮ್ಯ ಸರಿಯಲ್ಲ. ಹೆಣ್ಣಿರಲಿ, ಗಂಡಿರಲಿ ಒಂದೇ ಮಗು ಇರಲಿ ಎಂಬ ಧೇಯವನ್ನು ಪಾಲಿಸಬೇಕು ಎಂದು ನವ ವಧು–ವರರಿಗೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಇಲ್ಲಿನ ಮುರುಘಾ ಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಗುರುವಾರ ಆಯೋಜಿಸಿದ್ದ 28ನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು. ‘ಹಸು ಕರುವಿಗೆ ಜನ್ಮ ನೀಡಿದರೆ ಖುಷಿಪಡುತ್ತೇವೆ. ಆದರೆ, ಹೆಣ್ಣು ಮಗುವೊಂದು ಜನಿಸಿದರೆ ಬೇಸರಪಡುತ್ತೇವೆ. ಗಂಡು ಸಂತಾನವೇ ಬೆಳೆಯಬೇಕು ಎಂಬುದು ಸಂಕುಚಿತ ಮನೋಭಾವ. ಹೀಗಾಗಿ, ದೇಶದಲ್ಲಿ ಹೆಣ್ಣುಭ್ರೂಣ ಹತ್ಯೆಗಳು ಹೆಚ್ಚಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೆಲ ತಿಂಗಳ ಹಿಂದೆ ಮಠದ ಆವರಣದಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಮೂರು ದಿನಗಳ ಶಿಶುವನ್ನು ಪೋಷಕರು ಯಾವ ಕಾರಣಕ್ಕಾಗಿ ತೊರೆದಿದ್ದಾರೆ ಎಂಬುದು ಗೊತ್ತಿಲ್ಲ. ಶಿಶುವನ್ನು ಮಠವೇ ಪ್ರೀತಿಯಿಂದ ಆರೈಕೆ ಮಾಡುತ್ತಿದೆ’ ಎಂದು ಹೇಳಿದರು. ಅರಸೀಕೆರೆ ತಾಲ್ಲೂಕು ದೊಡ್ಡಮೇಟಿಕುರ್ಕೆಯ ಬೂದಾಳು ವಿರಕ್ತಮಠದ ಶಶಿಶೇಖರ ಸಿದ್ಧಬಸವ ಸ್ವಾಮೀಜಿ ಮಾತನಾಡಿ, ‘ವಾರ, ತಿಥಿ, ನಕ್ಷತ್ರ ನೋಡದೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದನ್ನು ಕಂಡು ಖುಷಿಯಾಗುತ್ತಿದೆ. ವಚನಗಳನ್ನು ಹೇಳುತ್ತ, ಶರಣರ ತತ್ವಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಚಂಚಲ ಮನಸಿನಿಂದ ಕೌಟುಂಬಿಕ ಬದುಕು ಹಾಳಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ನವ ವಧು–ವರರಿಗೆ ಕಿವಿಮಾತು ಹೇಳಿದರು.

ADVERTISEMENT

ಉಪವಿಭಾಗಾಧಿಕಾರಿ ಎ.ಸಿ.ವಿಜಯಕುಮಾರ್ ಮಾತನಾಡಿ, ‘ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಮಾದರಿಯ ವಿವಾಹಗಳನ್ನು ಬೆಳೆಸಿಕೊಂಡರೆ ಆರ್ಥಿಕ ಹೊರೆಯನ್ನು ತಗ್ಗಿಸಬಹುದು. ಆರ್ಥಿಕವಾಗಿ ಹಿಂದುಳಿದವರು ಮಾತ್ರವಲ್ಲ, ಎಲ್ಲರಿಗೂ ಇದು ಅನುಕೂಲ’ ಎಂದರು.

ಟಿ.ಪಿ.ಈರಮ್ಮ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸತೀಶ್, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎನ್.ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.