ADVERTISEMENT

ಅಭಿವೃದ್ಧಿ ಕೋಶದಲ್ಲಿ ಚರ್ಚೆ

ಜಲಸಿರಿ ಯೋಜನೆ: ಮಂಗಳೂರು ಮಹಾನಗರ ಪಾಲಿಕೆ ವಿಶೇಷ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 29 ಮೇ 2015, 11:37 IST
Last Updated 29 ಮೇ 2015, 11:37 IST

ಮಂಗಳೂರು:  ಮಂಗಳೂರು ಮಹಾ­ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಡಿಬಿ ಸಾಲಾಧಾರಿತ ಕ್ಯುಮಿಪ್‌­(ಕೆಐಯು­ಡಬ್ಲ್ಯೂಎಂಐಪಿ) ಜಲಸಿರಿ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವ ಕುರಿತು ಅಭಿವೃದ್ಧಿ ಕೋಶ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಗು­ವುದು ಎಂಬ ನಿರ್ಣಯವನ್ನು ಮಂಗ­ಳೂರು ಮಹಾನಗರ ಪಾಲಿಕೆ ವಿಶೇಷ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಮೇಯರ್‌ ಜೆಸಿಂತಾ ವಿಜಯ ಆಲ್ಫ್ರೆಡ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಸಿರಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಜಿಕೆಡಬ್ಲ್ಯೂ ಸಲಹಾ ಸಂಸ್ಥೆ ನೀಡಿದ ಪ್ರಾಥಮಿಕ ವರದಿಯ ಕುರಿತು ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸುಧೀರ್‌ ಶೆಟ್ಟಿ ಮಾತನಾಡಿ, ಯೋಜನೆಗೆ ನಮಗೆ ಯಾವುದೇ ರೀತಿಯ ವಿರೋಧವಿಲ್ಲ. ಆದರೆ, ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಸಾಲದ ವಿವರ­ಗಳನ್ನು ನೀಡಬೇಕು ಎಂದರು.
ಪಾಲಿಕೆ ಸದಸ್ಯ ಮಹಾಬಲ ಮಾರ್ಲ ಅವರು ಇದಕ್ಕೆ ದನಿಗೂಡಿಸಿದರು.

ಶಾಸಕ ಜೆ.ಆರ್‌. ಲೋಬೊ ಮಾತ­ನಾಡಿ, ಜಲಸಿರಿ ಯೋಜನೆಗೆ ಮಂಗ­ಳೂರು, ಉಡುಪಿ ಮತ್ತು ಪುತ್ತೂರು ಆಯ್ಕೆಯಾಗಿವೆ. ಸದ್ಯ ಈ ಯೋಜನೆ ಬಿಟ್ಟರೆ, ಬೇರೆ ಯೋಜನೆಗಳು ಪಾಲಿಕೆಗೆ ಬರುವ ಸಾಧ್ಯತೆ ಇಲ್ಲ. ಆದ್ದರಿಂದ ವಿಳಂಬ ಮಾಡದೇ, ಪಕ್ಷಭೇದ ಮರೆತು ಡಿಪಿಆರ್‌ ತಯಾರಿಸಲು ಅನುಮೋದನೆ ಕೊಡಬೇಕು ಎಂದರು.

ಈ ವಿಷಯದ ಕುರಿತು ಅಭಿವೃದ್ಧಿ ಕೋಶದಲ್ಲಿ ಚರ್ಚಿಸಿ, ಇನ್ನೊಂದು ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂಬ ನಿರ್ಣಯಕ್ಕೆ ಬರಲಾಯಿತು. ನಗರ ಯೋಜನಾ ವಿಭಾಗ­ದಲ್ಲಿ ಕಟ್ಟಡ ನಿರ್ಮಾಣ ಪರ­ವಾನಗಿ ನೀಡುವ ಸಂದರ್ಭದಲ್ಲಿ ಸಂಗ್ರ­ಹಿ­ಸಲಾದ ಪ್ರೀಮಿ­ಯಂ ಎಫ್‌ಎಆರ್‌ ಶುಲ್ಕವನ್ನು ರಸ್ತೆ ಅಭಿವೃದ್ಧಿಗೆ ವಿನಿ­ಯೋಗಿಸುವ ಕುರಿತು ತಾರಕಕ್ಕೇರಿದ ಚರ್ಚೆ ನಡೆಯಿತು.

ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಕೋರ್ಲಪಾಟಿ ಮಾತನಾಡಿ, ‘ಪ್ರೀಮಿ­ಯಂ ಎಫ್‌ಎಆರ್‌ ಶುಲ್ಕ ಪಡೆದ ರಸ್ತೆಯ ವಿಸ್ತರಣೆ ಮಾಡುವ ವೇಳೆ ಬೇರೆ ಬೇರೆ ಕೆಲಸಗಳನ್ನು ಕೈಗೊಳ್ಳಲೂ ಅವಕಾಶವಿದೆ. ಇಲ್ಲಿಯವರೆಗೆ ಸಂಗ್ರಹ­ವಾದ ಪ್ರೀಮಿ­ಯಂ ಎಫ್‌ಎಆರ್‌ ಶುಲ್ಕದ ಬಗ್ಗೆ ಮಾಹಿತಿ ಪಡೆದು, ಕಾರ್ಯ­ಯೋಜನೆಯನ್ನು ರೂಪಿಸ­ಲಾಗುವುದು. ನಂತರ ಅದನ್ನು ಸಭೆಯ ಅನು­ಮೋದನೆಗೆ ಇಡಲಾಗು­ವುದು’ ಎಂದು ಹೇಳಿದರು.

ಉಪ ಮೇಯರ್‌ ಪುರುಷೋತ್ತಮ ಚಿತ್ರಾಪುರ, ಶಾಸಕ ಐವನ್‌ ಡಿಸೋಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ  ಹರಿನಾಥ, ಕೇಶವ, ಪ್ರಕಾಶ್‌ ಬಿ. ಸಾಲ್ಯಾನ್‌, ದೀಪಕ್‌ ಕೆ ಪೂಜಾರಿ, ಪಾಲಿಕೆ ಸದಸ್ಯರು ಇದ್ದರು.

ಜಲಸಿರಿ ಯೋಜನೆಯಲ್ಲೇನಿದೆ?
ಪಾಲಿಕೆ ವ್ಯಾಪ್ತಿಯಲ್ಲಿ 24x7 ನೀರು ಸರಬರಾಜು ವ್ಯವಸ್ಥೆ. ಯೋಜನೆ ಅನುಷ್ಠಾನಕ್ಕೆ  ₨160 ಕೋಟಿ ಮಂಜೂರಾಗಿದೆ. ಶೇ 40 ಅನುದಾನ (₨64 ಕೋಟಿ), ಶೇ 50 ಸಾಲ (₨ 80ಕೋಟಿ), ಶೇ 10 ಪಾಲಿಕೆ ಪಾಲು (₨16 ಕೋಟಿ). ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ. ಯೋಜನೆ ಅನುಷ್ಠಾನಕ್ಕೆ 120 ಕೋಟಿ ಮಂಜೂರಾಗಿದೆ.

ಅಧಿಕಾರಿಗೆ ನೋಟಿಸ್‌: ಪ್ರೀಮಿಯಂ ಎಫ್‌ಎಆರ್‌ನಿಂದ ಪಾಲಿಕೆಗೆ ಈವರೆಗೆ ₨ 71 ಕೋಟಿ ಶುಲ್ಕ ವಸೂಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಅಧಿಕಾರಿಗೆ ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಕೋರ್ಲಪಾಟಿ ಅವರು ನಾಲ್ಕು ಗಂಟೆಯಲ್ಲಿ ಉತ್ತರ ನೀಡುವಂತೆ ಕಾರಣ ಕೇಳಿ ನೋಟಿಸ್‌ ನೀಡಿದರು.
ಪಾಲಿಕೆಗೆ ಈವರೆಗೆ ₨ 75.87 ಕೋಟಿ ಪ್ರೀಮಿಯಂ ಎಫ್‌ಎಆರ್‌ ಶುಲ್ಕ ಸಂದಿದೆ. ಇದಕ್ಕೆ ₨ 10.15 ಕೋಟಿ ಬಡ್ಡಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT