ADVERTISEMENT

ಅರ್ಜಿಗಳ ವಿಲೇವಾರಿಗೆ ಕ್ರಮ: ಪೂಜಾರಿ

ಕಟ್‌ಬೇಲ್ತೂರು: ಮನೆ ನಿವೇಶನ ರಹಿತರಿಂದ ಶಾಸಕರ ಮನೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:24 IST
Last Updated 19 ಏಪ್ರಿಲ್ 2017, 5:24 IST
ಕುಂದಾಪುರ: ‘ನಿವೇಶನ ರಹಿತ ಅರ್ಜಿದಾರರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಅರ್ಜಿದಾರರ ಅರ್ಜಿಗಳನ್ನು ಇತ್ಯರ್ಥ ಮಾಡಲು ವಿಳಂಬವಾಗುತ್ತಿದೆ ಎನ್ನುವ ಕಾರಣಗಳನ್ನು ಅಧಿಕಾರಿಗಳು ಹೇಳುತ್ತಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
 
ಕುಂದಾಪುರ ತಾಲ್ಲೂಕು ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವೇಶನ ರಹಿತ ಅರ್ಜಿದಾರರು ಶಾಸಕರ ಮನೆಗೆ ಮುತ್ತಿಗೆ ಹಾಕಿದರು.
 
ಈ ಸಂದರ್ಭ ಅರ್ಜಿದಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಆಕ್ಷೇಪ ರಹಿತ ಸರ್ಕಾರಿ ಭೂಮಿಗಳನ್ನು ಗುರುತಿಸಿ ಬಡವರಿಗಾಗಿ ಕಾಯ್ದಿರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
 
ಇದೇ 26 ರಂದು ಕುಂದಾಪುರ ತಹಶೀಲ್ದಾರ್, ಬೈಂದೂರು ವಿಶೇಷ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಪಿಡಿಒಗಳು ಹಾಗೂ ಕೃಷಿ ಕೂಲಿಕಾರರ ಸಂಘದ ಪ್ರತಿನಿಧಿಗಳೊಂದಿಗೆ ಜಂಟಿ ಸಭೆ ನಡೆಸಿ, ನಿವೇಶನ ರಹಿತ ಅರ್ಜಿದಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎಂದರು.
 
‘ನನಗೆ ಬಡವರ ಬಗ್ಗೆ ಸಹಾನುಭೂತಿ ಇದ್ದು, ನಾನು ಯಾವುದೇ ಕಾರಣಕ್ಕೂ ಭೂ ಮಾಲೀಕರ ಪರ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಬಹಿರಂಗ ಸಭೆ ಮೊದಲು ಶಾಸಕರು ಹಾಗೂ ಕೃಷಿ ಕೂಲಿಕಾರರ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರಾದ ವೆಂಕಟೇಶ ಕೋಣಿ, ‘ಹಲವು ಸಮಯದಿಂದ ತಾಲ್ಲೂಕಿನಾದ್ಯಂತ ಬಡ ನಿವೇಶನ ರಹಿತರಿಗೆ ಸರ್ಕಾರಿ ನಿವೇಶನಗಳನ್ನು ಒದಗಿಸುವಂತೆ ಅರ್ಜಿಗ ಳನ್ನು ನೀಡಿ, ಪ್ರತಿಭಟನೆ, ಮನವಿ, ಹೋರಾಟಗಳನ್ನು ನಡೆಸುತ್ತಾ ಬಂದಿ ದ್ದರೂ, ಈವರೆಗೂ ಅಧಿಕಾರಿಗಳಿಂದ ಸೂಕ್ತ ಸ್ಪಂದನ ದೊರಕಿಲ’ ಎಂದು ಅವರು ಹೇಳಿದರು.
 
ನಾಡಾ, ನಾವುಂದ ಮುಂತಾದ ಪಂಚಾಯಿತಿಗಳಲ್ಲಿ ಸರ್ಕಾರಿ ಭೂಮಿಗಳು ಇದ್ದರೂ, ಅದನ್ನು ಬದವರಿಗಾಗಿ ಕಾಯ್ದಿರಿಸಲು ವಿಳಂಬ ಧೋರಣೆಯನ್ನು ತೋರಲಾಗುತ್ತಿದೆ’ ಎಂದು ಆಕ್ಷೇಪಿಸಿದ ಅವರು ಸಮಸ್ಯೆಯ ಪರಿಹಾರಕ್ಕಾಗಿ ಶಾಸಕರು ಮಧ್ಯ ಪ್ರವೇಶಿಸುವಂತೆ ಅವರು ಮನವಿ ಮಾಡಿದರು.
***
ಶಾಸಕರ ಮನೆ ಚಲೋ
ಶಾಸಕರ ಮನೆ ಮುತ್ತಿಗೆ ಕಾರ್ಯಕ್ರಮದ ಮೊದಲು ಹೆಮ್ಮಾಡಿಯಲ್ಲಿ ಬಹಿರಂಗ ಸಭೆಯನ್ನು ನಡೆಸಿದ ಸಂಘ ಟನೆಯ ಕಾರ್ಯಕರ್ತರು, ಬಳಿಕ ಹೆಮ್ಮಾಡಿಯಿಂದ ಶಾಸಕರ ಮನೆ ಇರುವ ಕಟ್‌ಬೇಲ್ತೂರು ವರೆಗೆ ಕಾಲ್ನಡಿಗೆಯಲ್ಲಿ ಶಾಸಕರ ಮನೆ ಚಲೋ ನಡೆಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್‌.ರಾಜು ದೇವಾಡಿಗ, ವಿವಿಧ ಕಾರ್ಮಿಕ ಸಂಘಟನೆಯ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ, ಮಹಾಬಲ ವಡೇರ ಹೋಬಳಿ, ಎಚ್. ನರಸಿಂಹ, ರಾಜೀವ ಪಡು ಕೋಣೆ, ಸುರೇಶ್ ಕಲ್ಲಾಗಾರ್, ನಾಗರತ್ನ ನಾಡಾ, ಶೀಲಾವತಿ ಪಡುಕೋಣೆ, ಸಂತೋಷ್ ಹೆಮ್ಮಾಡಿ ನೇತೃತ್ವ ವಹಿಸಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜಪ್ಪ, ಎಸ್‌.ಐ. ನಾಸೀರ್‌ ಹುಸೇನ್‌ ಹಾಗೂ ದೇವರಾಜ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.