ADVERTISEMENT

ಇಂದಿನಿಂದ ನಿತ್ಯ ಮೂರು ಪಂದ್ಯ

ಎಂಪಿಎಲ್ ಟ್ರೋಫಿ ಅನಾವರಣ; ತಂಡಗಳ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:06 IST
Last Updated 20 ಮಾರ್ಚ್ 2018, 11:06 IST

ಮಂಗಳೂರು: ಬ್ರಾಂಡ್ ವಿಷನ್ ಈವೆಂಟ್ಸ್, ಮಂಗಳೂರು ಆಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸೀ ಬರ್ಡ್ ಕ್ರಿಕೆಟ್ ಅಕಾಡೆಮಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಮೋದನೆಯೊಂದಿಗೆ ಪಣಂಬೂರಿನ ನವಮಂಗಳೂರು ಬಂದರು ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇದೇ 20ರಿಂದ ಏಪ್ರಿಲ್ 1ರವರೆಗೆ ಆಯೋಜಿಸಿರುವ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ ಮತ್ತು ತಂಡಗಳ ಘೋಷಣಾ ಕಾರ್ಯಕ್ರಮವು ನಗರದ ಸಿಟಿ ಸೆಂಟರ್ ಸಭಾಭವನದಲ್ಲಿ ನಡೆಯಿತು.

ಟ್ರೋಫಿಯನ್ನು ಅನಾವರಣಗೊಳಿಸಿ ಮಾತನಾಡಿದ ಮೀನುಗಾರಿಕಾ ಫೆಡರೇಷನ್‌ ಅಧ್ಯಕ್ಷ ಯಶಪಾಲ್ ಸುವರ್ಣ, ಎಂಪಿಎಲ್ ಮೂರು ವರುಷಗಳಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯದಲ್ಲಿ ಒಂದು ಕ್ರಿಕೆಟ್ ಹಬ್ಬವಾಗಿ ಮೂಡಿ ಬಂದಿದೆ. ಇಲ್ಲಿನ ಎಲೆಮರೆಯಲ್ಲಿ ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳಿಗೆ ಮೇಲ್ದರ್ಜೆಗೇರಲು ಮೆಟ್ಟಿಲಾಗಿರುವುದು ಸಂತಸಕರ ಎಂದರು.

ವಿವಿಧ ತಂಡಗಳ ಆಟದ ಉಡುಗೆಗಳನ್ನು ಬಿಡುಗಡೆ ಮಾಡಲಾಯಿತು. ಕ್ಲಾಸಿಕ್ ಬಂಟ್ವಾಳ, ಟಿ4 ಸೂಪರ್‌ಕಿಂಗ್ ಮತ್ತು ಯುನೈಟೆಡ್ ಉಳ್ಳಾಲ ತಂಡಗಳನ್ನು ಘೋಷಣೆ ಮಾಡಲಾಯಿತು. ಈ ತಂಡಗಳ ಮಾಲೀಕರು, ತರಬೇತುದಾರರು ಮತ್ತು ಆಟಗಾರರು ವೇದಿಕೆಯಲ್ಲಿ ಕ್ಯಾಟ್‌ವಾಕ್‌ ಪ್ರದರ್ಶಿಸಿದರು. ನೃತ್ಯ ವೈವಿಧ್ಯ ಕಾರ್ಯಕ್ರಮ ಜನಮನವನ್ನು ರಂಜಿಸಿತು.

ADVERTISEMENT

ಲಾರೆನ್ಸ್ ಡಿಸೋಜ,ಗಿರಿಧರ್ ಶೆಟ್ಟಿ, ಎಂ.ಎಚ್.ಶರೀಫ್, ಮುಸ್ತಾಫ, ಹಂಝಾ ದೇಂಜಿಪಾಡಿ, ರಾಜೇಶ್, ದಿಜೀಶ್ ದಾಮೋದರನ್, ನೀಶಾದ್ ಎಮ್ಮೆಕೆರೆ, ಮ್ಯಾಕ್ನಿಲ್ ನೋರೊನ್ಹ, ಝಾಕೀರ ಉಳ್ಳಾಲ, ಮಾನಸ ಜೈನ್, ಶಾವಾಝ್, ಮಮ್ತಾಝ್, ತನುಜಾ, ಜಿನ್ಸ್ ಜಾನ್, ನೇಹಾ ಭಾಗವಹಿಸಿದ್ದರು. ಮಹ್ಮಮದ್ ಸಿರಾಜುದ್ದೀನ್‌ ಸ್ವಾಗತಿಸಿದರು. ಇಮ್ತಿಯಾಝ್‌ ವಂದಿಸಿದರು.

ಮಂಗಳವಾರ ಸಂಜೆ 5.30ಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ ಪ್ರಸಾದ್‌ ಚಾಲನೆ ನೀಡಲಿದ್ದು, ಭಾರತದ ಮಾಜಿ ಆಟಗಾರರಾದ ರಘುರಾಮ್ ಭಟ್ ಮತ್ತು ಶ್ರೀಶಾಂತ್ ಭಾಗವಹಿಸಲಿದ್ದಾರೆ. ಶ್ರೀಲಂಕಾದ ಕ್ರಿಕೆಟ್ ಆಟಗಾರರಾದ ರೋಷನ್ ಡಿಸಿಲ್ವಾ ಮತ್ತು ಮಿಲಿಂದ್ ಸಿರಿವರ್ಧನೆ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು.
**
ನಿತ್ಯ ಮೂರು ಪಂದ್ಯ
ಇದೇ 20ರಿಂದ ನಿತ್ಯ ಮೂರು ಪಂದ್ಯಗಳು ಬೆಳಿಗ್ಗೆ 9, ಮಧ್ಯಾಹ್ನ 2 ಮತ್ತು ಸಂಜೆ 6 ಗಂಟೆಗೆ ನಡೆಯಲಿವೆ. ಈ ಬಾರಿ ಕೆಪಿಎಲ್, ಐಪಿಎಲ್, ರಣಜಿಯ ಖ್ಯಾತನಾಮ ಆಟಗಾರರು ವಿವಿಧ ತಂಡಗಳಲ್ಲಿ ಭಾಗವಹಿಸುತ್ತಿದ್ದು, ಪಂದ್ಯಗಳು ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಲಿವೆ.

ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ₹6 ಲಕ್ಷ ನಗದು, ದ್ವಿತೀಯ ಬಹುಮಾನ ₹3 ಲಕ್ಷ ದೊರೆಯಲಿದೆ. ಸರಣಿ ಶ್ರೇಷ್ಠ ಆಟಗಾರನಿಗೆ ಹೊಚ್ಚ ಹೊಸ ಅಮೆರಿಕನ್‌ ಯು.ಎಂ. ಬೈಕ್‌ ಅನ್ನು ಏರುವ ಅವಕಾಶವನ್ನು ಒದಗಿಸಲಾಗಿದೆ. ಇತರ ಹಲವಾರು ಬಹುಮಾನಗಳು ಆಟಗಾರರ ಕೈಸೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.