ADVERTISEMENT

ಈ ಮಳೆಗಾಲದಲ್ಲೂ ಸಂಚಾರ ಕಷ್ಟ

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:51 IST
Last Updated 20 ಮೇ 2017, 4:51 IST
ಈ ಮಳೆಗಾಲದಲ್ಲೂ ಸಂಚಾರ ಕಷ್ಟ
ಈ ಮಳೆಗಾಲದಲ್ಲೂ ಸಂಚಾರ ಕಷ್ಟ   

ಸುಬ್ರಹ್ಮಣ್ಯ: ಗುತ್ತಿಗಾರು -ಕಮಿಲ -ಬಳ್ಪ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಇಡೀ ರಸ್ತೆ ತೀರಾ ಹದಗೆಟ್ಟಿದ್ದು ಈ ಬಾರಿ ಮಳೆಗಾಲ ಇಲ್ಲಿ ಸಂಚಾರವೇ ಕಷ್ಟವಾಗಲಿದೆ.

ಮೊದಲ ಮಳೆಗೇ ರಸ್ತೆ ಪೂರ್ತಿ ಕೆಸರುಮಯವಾಗಿದೆ. ಮಳೆಗಾಲದ ಸಂದರ್ಭ ಇಲ್ಲಿ ವಾಹನ ಓಡಾಟವೇ ಸ್ಥಗಿತಗೊಳ್ಳುವ ಆತಂಕ ಇದೆ. ಗ್ರಾಮೀಣ ಭಾಗದ ಜನರ 10 ವರ್ಷದ ಬೇಡಿಕೆ ನಿರ್ಲಕ್ಷ್ಯ ಮಾಡಿದ ಇಲಾಖೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲ್ಲೂಕಿನ ಪ್ರಮುಖ ಸಂಪರ್ಕ ರಸ್ತೆಗಳ ಪೈಕಿ ಗುತ್ತಿಗಾರು ಕಮಿಲ ಬಳ್ಪ ರಸ್ತೆಯೂ ಒಂದು. ಎರಡು ರಾಜ್ಯ ಹೆದ್ದಾರಿಗಳನ್ನು  ಸಂಪರ್ಕಿಸುವ ರಸ್ತೆ ಕೂಡಾ ಇದಾದ್ದರಿಂದ ರಸ್ತೆ ದುರಸ್ತಿಯಾಗಬೇಕು ಎಂಬ ಬೇಡಿಕೆಗೆ 10 ವರ್ಷ ಕಳೆದಿದೆ. ಆದರೆ ಇದುವರೆಗೂ ದುರಸ್ತಿಯಾಗಿಲ್ಲ. ಪ್ರತಿ ಬಾರಿ ಚುನಾವಣೆ ವೇಳೆಗೆ ಭರವಸೆ ನೀಡುವ ರಸ್ತೆ ಇದಾಗಿ ಉಳಿದಿದೆ. ಇದೀಗ ಮಳೆಗಾಲ ಮತ್ತೆ ಆರಂಭ ವಾಗುತ್ತಿದ್ದು ವಾಹನ ಸಂಚಾರ ಕಷ್ಟವಾಗಲಿದೆ.

ADVERTISEMENT

ಜಿಲ್ಲಾ ಪಂಚಾಯಿತಿಗೆ ಸೇರಿದ ಈ 6 ಕಿ.ಮೀ.ರಸ್ತೆಗೆ ಎರಡು ವರ್ಷದ ಹಿಂದೆ ಸುಮಾರು 1 ಕಿಮೀ ಮರು ಡಾಂಬರೀಕರಣ ನಡೆದಿತ್ತು. ಇಂದು ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸುತ್ತಿದೆ. ಕೆಲವು ಕಡೆ ವಾಹನ ಸಂಚಾರಕ್ಕೆ ತೀರಾ ಕಷ್ಟವಾಗಿದೆ.

ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭ ಸ್ಥಳೀಯರು ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಅದು ಕೈಗೂಡಿ ರಲಿಲ್ಲ.  ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆಗಳಿಗೆ ತಿಳಿಸಿದ್ದರೂ ಯಾರಿಂದಲೂ ಈ ರಸ್ತೆಗೆ ನ್ಯಾಯ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.