ADVERTISEMENT

‘ಎಲ್ಲಿ ಹೋದರೂ ಭಾರತೀಯರಾಗಿ ಇರಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 8:34 IST
Last Updated 14 ನವೆಂಬರ್ 2017, 8:34 IST

ಮಂಗಳೂರು: ‘ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದ ನಂತರ ಉದ್ಯೋಗಕ್ಕೆ ವಿದೇಶಗಳಿಗೆ ಹೋದರೂ ಮಾನಸಿಕವಾಗಿ ಭಾರತೀಯರೇ ಆಗಿರಬೇಕು’ ಎಂದು ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಚಂದ್ರಶೇಖರ್‌ ಕೆ. ಹೇಳಿದರು. ನಗರದ ವಿಕಾಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ವಿಜ್ಞಾನ ನಮ್ಮನ್ನು ತಯಾರಿ ಮಾಡುತ್ತದೆ. ಭಾರತೀಯರಾದ ನಾವು ಶಿಸ್ತು ಮತ್ತು ಸ್ವಚ್ಛತೆಯನ್ನು ಮರೆತಿದ್ದೇವೆ. ವಿದೇಶಗಳಿಗೂ ನಮ್ಮ ದೇಶಕ್ಕೂ ಈ ಎರಡು ವಿಷಯಗಳಲ್ಲಿ ವ್ಯತ್ಯಾಸವಿದೆ. ಸ್ವಚ್ಛ ಭಾರತದಂತಹ ಕಾರ್ಯಕ್ರಮಗಳಿದ್ದರೂ, ನಾವು ಆ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅಧ್ಯಾಪಕರು ಶಿಸ್ತಿನಿಂದಿರಬೇಕು. ಆ ಶಿಸ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಪಿಯುಸಿ ಹಂತದ ಈ ಶಿಕ್ಷಣವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ವಿಕಾಸ್ ಕಾಲೇಜಿನ ಸಂಚಾಲಕ ಡಾ. ಡಿ. ಶ್ರೀಪತಿ ರಾವ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಟಿ. ರಾಜಾರಾಮ್ ರಾವ್, ವಿಕಾಸ್ ಎಜುಕೇಶನ್‌ ಟ್ರಸ್ಟ್‌ನ ಟ್ರಸ್ಟಿ ಜೆ. ಕೊರಗಪ್ಪ, ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಕೆ., ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್ ವೇದಿಕೆಯಲ್ಲಿದ್ದರು. ಕಾಲೇಜಿನ ಆಡಳಿತಾಧಿಕಾರಿ ವಿದ್ಯಾ ಕಾಮತ್ ನಿರೂಪಿಸಿದರು. ಉಪನ್ಯಾಸಕಿ ಐಶ್ವರ್ಯಾ ಕೆ. ವಂದಿಸಿದರು.

ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಾಲಿನಿ ಬಿ.ಎಂ., ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸೌಹಾರ್ದ್ ಶೆಟ್ಟಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ವಿಕಾಸ್ ಕಾಲೇಜಿನ ಬಾಲಕಿಯರ ಕಬಡ್ದಿ ತಂಡದ ಕೋಚ್ ಸುಮಿತಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.