ADVERTISEMENT

ಐದು ವರ್ಷದ ಹೋರಾಟಕ್ಕೆ ಸಂದ ಜಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:31 IST
Last Updated 3 ಸೆಪ್ಟೆಂಬರ್ 2017, 9:31 IST
ಕಿನ್ಯಾ ಗ್ರಾಮಕ್ಕೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಗ್ರಾಮಸ್ಥರು ಸ್ವಾಗತಿಸಿದರು.
ಕಿನ್ಯಾ ಗ್ರಾಮಕ್ಕೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಗ್ರಾಮಸ್ಥರು ಸ್ವಾಗತಿಸಿದರು.   

ಉಳ್ಳಾಲ: ಆ ಭಾಗದ ಜನರಿಗೆ ಹಲವು ಕಿ.ಮೀ ಉದ್ದ ನಡೆದುಕೊಂಡು ಸಾಗಿ ಬಸ್‌ ಅನ್ನು ಏರಬೇಕಿತ್ತು. ಮಳೆಗಾಲದಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಕೆಲಸಕ್ಕೆ ಹೋಗುವವರ ಸಂಕಷ್ಟ ಬಹಳಷ್ಟಿತ್ತು. ಈ ನಡುವೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಖಾಸಗಿ ಬಸ್‌ ಮಾಲೀಕರು ಎರಡು ಬಸ್‌ಗಳನ್ನು ರಸ್ತೆಗಿಳಿಸಿದರೂ, ಸಮರ್ಪಕ ಓಡಾಟ ನಡೆಸಲು ಕಷ್ಟವಾಗಿತ್ತು. ಐದು ವರ್ಷಗಳಿಂದ ಗ್ರಾಮಸ್ಥರ ಹೋರಾಟ ನಡೆಸುತ್ತಲೇ ಬಂದರು. ಇದೀಗ ಹೋರಾಟದ ಫಲವಾಗಿ ನಾಟೆಕಲ್ ಮಾರ್ಗವಾಗಿ ಮಂಗಳೂರಿನಿಂದ ಕಿನ್ಯಾ ಗ್ರಾಮಕ್ಕೆ ಶನಿವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ರಸ್ತೆಗಿಳಿದಿದೆ.

10 ವರ್ಷಗಳ ಹಿಂದೆ ಮಂಗಳೂರಿನಿಂದ ನಾಟೆಕಲ್ ಮಾರ್ಗವಾಗಿ ಕಿನ್ಯಾ ಕಡೆಗೆ ಬಸ್‌ಗಳ ಓಡಾಟವೇ ಇರಲಿಲ್ಲ. ಗ್ರಾಮದ ಜನ ಹಲವು ಕಿ.ಮೀ. ನಡೆದುಕೊಂಡೇ ಮಂಜನಾಡಿ ಅಥವಾ ನಾಟೆಕಲ್ ಕಡೆಗೆ ಬಂದು ಬಸ್‌ ಹತ್ತಬೇಕಿತ್ತು. ರಸ್ತೆ ಅವ್ಯವಸ್ಥೆಯಿಂದ ಬೇರೆ ವಾಹನಗಳೂ ಬರಲು ಅನಾನುಕೂಲ ಆಗಿದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುಬೇಕಾಗಿತ್ತು.

ಬಳಿಕ ಸಮರ್ಪಕವಾಗಿ ಬಸ್‌ ಸಂಚಾರ ನಡೆಸದ್ದರಿಂದ ಖಾಸಗಿ ಬಸ್‌ಗಳಿದ್ದರೂ, ಗ್ರಾಮಸ್ಥರ ಪಾಡು ಬದಲಾಗಲಿಲ್ಲ. ಐದು ವರ್ಷಗಳಿಂದ ನಡೆಯುತ್ತಿರುವ ಗ್ರಾಮಸಭೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಾಗಿ ಹೋರಾಟ ಮುಂದುವರಿದಿತ್ತು. ಹಲವು ಬಾರಿ ನಿರ್ಣಯ ಪಡೆದುಕೊಂಡರೂ, ಬಸ್‌ ಮಾತ್ರ ಗ್ರಾಮಕ್ಕೆ ಬಂದಿರಲಿಲ್ಲ.

ADVERTISEMENT

ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಶಿಫಾರಸಿನ ಮೇರೆಗೆ, ಕಿನ್ಯಾ ಗ್ರಾಮ ಪಂಚಾಯಿತಿ ಆಡಳಿತದ ನಿರಂತರ ಶ್ರಮದಿಂದ ಬಸ್‌ ಓಡಾಟ ಆರಂಭಿಸಿದೆ. ಶನಿವಾರ ಅಂಬ್ಲಮೊಗರುವಿನಲ್ಲಿ ಸಚಿವ ಖಾದರ್‌ ಅವರು, ಎರಡು ಬಸ್‌ಗಳಿಗೆ ಚಾಲನೆ ನೀಡಿದರು. ಕಿನ್ಯಾ ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಸರ್ಕಾರಿ ಬಸ್‌ ಅನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂಹಾರ ಹಾಕಿ, ಸಿಹಿತಿಂಡಿಗಳನ್ನು ವಿತರಿಸಿ ಬರಮಾಡಿಕೊಂಡರು.

‘ಗ್ರಾಮದ ಅಭಿವೃದ್ಧಿಗೆ ರಸ್ತೆ ಮತ್ತು ಸಾರಿಗೆ ಮುಖ್ಯವಾಗಿದೆ. ಇದನ್ನು ಶಾಸಕರು ಒದಗಿಸುವಲ್ಲಿ ಮುತುವರ್ಜಿ ವಹಿಸಿ ನೆರವೇರಿಸಿರುವುದು ಶ್ಲಾಘ ನೀಯ. ಇದೀಗ ಸಾರಿಗೆ ಸಂಸ್ಥೆ ಬಸ್‌ ಅನ್ನು ಬಸ್‌ ಅನ್ನು ಒದಗಿಸುವ ಮೂಲಕ ಜನರ ಬೇಡಿಕೆಗೆ ಸ್ಪಂದನೆ ದೊರೆತಿದೆ.ಹೆಚ್ಚುವರಿ ಬಸ್‌ ಅನ್ನು ಒದಗಿಸುವ ವಿಶ್ವಾಸ ನಮ್ಮಲ್ಲಿದೆ’ ಎಂದು ಕಿನ್ಯಾ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಅಬುಸಾಲಿ ಹಾಜಿ ಹೇಳಿದರು.

ಪಂಚಾಯಿತಿ ಸದಸ್ಯರಾದ ಅಬುಸಾಲಿ, ಫಾರುಕ್ ಕಿನ್ಯಾ, ಮಹಮ್ಮದ್, ಕಾಂಗ್ರೆಸ್ ಬೂತ್ ಅಧ್ಯಕ್ಷ ಮೊಯ್ದೀನ್ ಕುಂಞಿ, ಪಂಚಾಯಿತಿ ಸದಸ್ಯ ಹಮೀದ್ ಕಿನ್ಯಾ, ಕಿನ್ಯಾ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಕುಂಞಿ, ಕಾರ್ಯದರ್ಶಿ ಅಬುಸಾಲಿ, ಮಾಜಿ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.