ADVERTISEMENT

ಕೇರಳದಿಂದ ಗಾಂಜಾ ಸಾಗಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 5:27 IST
Last Updated 20 ನವೆಂಬರ್ 2017, 5:27 IST

ಮಂಗಳೂರು: ಕೇರಳದ ಮಂಜೇಶ್ವರದ ಕಡೆಯಿಂದ ಮಂಗಳೂರು ನಗರಕ್ಕೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ತಾಲ್ಲೂಕಿನ ನರಿಂಗಾನ ಗ್ರಾಮದ ನೆತ್ತಿಲಪದವು ಬಳಿ ಭಾನುವಾರ ಬೆಳಿಗ್ಗೆ ಬಂಧಿಸಿರುವ ಕೊಣಾಜೆ ಠಾಣೆ ಪೊಲೀಸರು, 650 ಗ್ರಾಂ. ಗಾಂಜಾ, ಆಟೊ ರಿಕ್ಷಾ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

‘ಮಂಜೇಶ್ವರದ ನಿವಾಸಿ ಅಬ್ದುಲ್ ರಹಿಮಾನ್ ಕಡಂಬಾರ್‌ ಮತ್ತು ಅಬ್ದುಲ್‌ ಖಾದರ್‌, ಮಾಡ ಉದ್ಯಾವರ ಬಂಧಿತರು. ಭಾನುವಾರ ಬೆಳಿಗ್ಗೆ ನೆತ್ತಿಲಪದವು ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಂಜೇಶ್ವರ ಕಡೆಯಿಂದ ಬಂದ ಆರೋಪಿಗಳು ರಿಕ್ಷಾ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದರು. ಆಗ ಅವರನ್ನು ಬೆನ್ನಟ್ಟಿ ಹಿಡಿಯಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ಕೇರಳದ ಮಂಜೇಶ್ವರ ಮತ್ತು ಉಪ್ಪಳದಿಂದ ಗಾಂಜಾ ತಂದು ಮಂಗಳೂರಿನಲ್ಲಿ ಯುವಕರಿಗೆ ಪೂರೈಕೆ ಮಾಡುತ್ತಿರುವುದಾಗಿ ಆರೋಪಿಗಳಯ ವಿಚಾರಣೆ ವೇಳೆ ತಿಳಿಸಿದ್ದಾರೆ. ಆರೋಪಿಗಳಿಂದ ಒಟ್ಟು 13 ಪೊಟ್ಟಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅವರಿಂದ ವಶಕ್ಕೆ ಪಡೆದ ಸ್ವತ್ತುಗಳ ಒಟ್ಟು ಮೌಲ್ಯ ₹ 93,000 ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮತ್ತು ಎಸಿಪಿ ರಾಮರಾವ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣೆ ಇನ್‌ಸ್ಪೆಕ್ಟರ್‌ ಪಿ.ಅಶೋಕ್‌ ಸಬ್‌ ಇನ್‌ಸ್ಪೆಕ್ಟರ್‌ ರವಿ ಪಿ.ಪವಾರ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಸಂಜೀವ, ಕಾನ್‌ಸ್ಟೆಬಲ್‌ಗಳಾದ  ಪ್ರದೀಪ್‌, ಅಶೋಕ್‌ ಮತ್ತು ನಾಗರಾಜ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.