ADVERTISEMENT

ಕೈದಿಯಿಂದ ಪೊಲೀಸರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:01 IST
Last Updated 9 ನವೆಂಬರ್ 2017, 9:01 IST

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸು ಕರೆದೊಯ್ಯುತ್ತಿದ್ದಾಗ ಕೈಗೆ ಹಾಕಿದ್ದ ಕೋಳದ ಚೈನ್‌ನಿಂದಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಬೆಳ್ತಂಗಡಿ ತಾಲ್ಲೂಕಿನ ಪೂಂಜಾಲಕಟ್ಟೆ ನಿವಾಸಿ ನೂಮಾನ್‌ ಹಲ್ಲೆ ನಡೆಸಿದ ಆರೋಪಿ. ಈತ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತನಾಗಿದ್ದು, ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದ ಹೆಡ್‌ ಕಾನ್‌ಸ್ಟೆಬಲ್‌ ಕುರಿಯಾ ಕೋಸ್‌ ಮತ್ತು ಗೃಹರಕ್ಷಕ ಸಿಬ್ಬಂದಿ ಮೋಹನ್‌ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ.

‘ಬುಧವಾರ ಬೆಳಿಗ್ಗೆ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 11.30ರ ಸುಮಾರಿಗೆ ವಾಪಸು ಕರೆದೊಯ್ಯುತ್ತಿದ್ದಾಗ ಪಿವಿಎಸ್‌ ವೃತ್ತದ ಬಳಿ ಕೈಕೋಳದ ಚೈನ್‌ನಿಂದ ಕುರಿಯಾ ಕೋಸ್‌ ಅವರ ಕುತ್ತಿಗೆಗೆ ಬಿಗಿದಿದ್ದಾನೆ. ತಡೆಯಲು ಹೋದ ಮೋಹನ್‌ ಮೇಲೂ ಹಲ್ಲೆ ಮಾಡಿದ್ದಾನೆ. ಆತನ ಕೈ ಕಚ್ಚಿ ಕುರಿಯಾ ಕೋಸ್‌ ಬಿಡಿಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅದೇ ವೇಳೆ ಪಿವಿಎಸ್‌ ವೃತ್ತದ ಬಳಿ ಕರ್ತವ್ಯದಲ್ಲಿದ್ದ ಸಂಚಾರ ವಿಭಾಗದ ಪೊಲೀಸರು ನೂಮಾನ್‌ನನ್ನು ವಶಕ್ಕೆ ಪಡೆದರು. ಬಳಿಕ ಆತನನ್ನು ಮಂಗಳೂರು ಉತ್ತರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆತ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.