ADVERTISEMENT

ಜನವಸತಿ ಪ್ರದೇಶದಲ್ಲೇ ಗಣಿಗಾರಿಕೆ!

ಕೌಡೂರಿನ ಕಲ್ಲಿನ ಕ್ವಾರಿಯ ನೈಜ ಸ್ವರೂಪ ಬಯಲು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:15 IST
Last Updated 21 ಜುಲೈ 2017, 7:15 IST

ಬಜ್ಪೆ: ಗುರುಪುರ ಕೈಕಂಬ ಸಮೀಪದ ಕೊಳಂಬೆ ಕೌಡೂರು ಎಂಬಲ್ಲಿ ಚಂದ್ರ ಹಾಸ ಟಿ. ಅಮೀನ್ ನಡೆಸುತ್ತಿರುವ ಕಲ್ಲಿನ ಕ್ವಾರಿ ಹಾಗೂ ಸಮೀಪದ ಮನೆ, ದೇವಸ್ಥಾನ, ಶಾಲೆ ಇತ್ಯಾದಿಗಳ ಅಂತರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಟೇಪ್ ಮತ್ತು ಜಿಪಿಎಸ್ ಮೂಲಕ ಅಳತೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ.

ಉಪವಿಭಾಗಾಧಿಕಾರಿ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಈ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು, ತಮ್ಮ ವರದಿಯಲ್ಲಿ ಕಲ್ಲಿನ ಕ್ವಾರಿ ಹಾಗೂ ಸುತ್ತಲಿನ ಅಂತರವನ್ನು ನಮೂದಿಸಿದ್ದಾರೆ. ಕಲ್ಲುಗಣಿ ಗುತ್ತಿಗೆ ಗಡಿಭಾಗಕ್ಕೆ ಇರುವ ವಿಸ್ತೀರ್ಣವನ್ನು ಟೇಪ್ ಹಾಗೂ ಜಿಪಿಎಸ್‌ನಿಂದ ಅಳತೆ ಮಾಡುವಾಗ ಕೆಲವೊಂದು ವ್ಯತ್ಯಾಸ ಕಂಡುಬಂದಿದೆ.

ಈ ವ್ಯತ್ಯಾಸಕ್ಕೆ  ಕಾರಣವೆಂದರೆ ಟೇಪ್‌ನಲ್ಲಿ ಅಳತೆ ಮಾಡುವಾಗ ನಡುವಲ್ಲಿ ಹಳ್ಳ, ದಿಣ್ಣೆ ಗಳು, ಗಿಡಗಳಿಂದ ಕೂಡಿದೆ. ಅದಕ್ಕಾಗಿ ಜಿಪಿಎಸ್ ತಂತ್ರಜ್ಞಾನದ ಮೂಲಕ ವಿಸ್ತೀರ್ಣವನ್ನು ಕೈಗೊಳ್ಳಲಾಗಿದ್ದು, ಸುತ್ತಲಿನ ಮನೆಗಳು, ದೇವಸ್ಥಾನ ಕಲ್ಲಿನ ಕ್ವಾರಿಯ ಕೆಲವೇ ಮೀಟರ್‌ಗಳ ಅಂತರದಲ್ಲಿ ಕಂಡುಬಂದಿದೆ. ಹೀಗಾಗಿ ಕಲ್ಲಿನ ಕ್ವಾರಿ ಮುಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ADVERTISEMENT

ಜಿಪಿಎಸ್ ತಂತ್ರಜ್ಞಾನದ ಮೂಲಕ ಕಂಡುಕೊಂಡ ಅಂತರ ಹಾಗೂ ಟೇಪ್‌ ನಲ್ಲಿ ನಡೆಸಿದ ಅಂತರದ ವಿಸ್ತೀರ್ಣವನ್ನು ವರದಿಯಲ್ಲಿ ನಮೂದಿಸಲಾಗಿದೆ. ಅದರಂತೆ ನಾರಾಯಣ ಪೂಜಾರಿ ಅವರ ಮನೆಗೂ ಕಲ್ಲಿನ ಕ್ವಾರಿಗೂ ಇರುವ ಅಂತರ 68 ಮೀಟರ್, ಪೂವಪ್ಪ ಪೂಜಾರಿ 80 ಮೀಟರ್, ಮಾದಪ್ಪ ಪೂಜಾರಿ 98 ಮೀಟರ್, ಸಂಕಪ್ಪ ಪೂಜಾರ್ತಿ 125 ಮೀಟರ್, ಲಕ್ಷ್ಮಿ 95 ಮೀಟರ್ ಹಾಗೂ ಕಾಳಭೈರವೇಶ್ವರ ದೇವಸ್ಥಾನದ ಮಧ್ಯೆ 98 ಮೀಟರ್ ಅಂತರವಿದೆ. ಕಲ್ಲುಗಣಿ ಸುತ್ತಲಿನ ಮನೆಗಳ ಸಮೀಪವೇ ಇರುವುದರಿಂದ ಮುಂದಿನ ದಿನಗಳಲ್ಲಿ ಕಲ್ಲಿನ ಕ್ವಾರಿ ಏನಾಗಬಹುದೆಂಬ ಸಾಕಷ್ಟು ಕುತೂಹಲ ಉಂಟು ಮಾಡಿದೆ.

ಈ ಹಿಂದೆ ಏನಾಗಿತ್ತು?:

2014ರ ಡಿಸೆಂಬರ್ ತಿಂಗಳಲ್ಲಿ ಹಿಂದಿನ ಮಂಗಳೂರು ತಹಶೀಲ್ದಾರ್ ಆಗಿದ್ದ ಮೋಹನ್ ಅವರು ಸ್ಥಳ ತನಿಖೆ ನಡೆಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದು, ಆ ವರದಿಯ ಆಧಾರದಲ್ಲಿ ಕೌಡೂರಿನ ಕಲ್ಲಿನ ಗಣಿಗೆ ಪರವಾನಗಿ ನೀಡಲಾಗಿತ್ತು.

ಅವರು ತನ್ನ ವರದಿಯಲ್ಲಿ ಕಲ್ಲುಗಣಿ ನವೀಕರಣ ಕೋರಿರುವ ಜಮೀನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಮೀನಲ್ಲ, ಈ ಬಗ್ಗೆ ಸಾರ್ವಜನಿಕ ಆಕ್ಷೇಪಣೆ ಇರುವುದಿಲ್ಲ, ಕಲ್ಲುಗಣಿ ಸಮೀಪ ರೈಲ್ವೆ ಲೇನ್, ನೀರಿನ ಕಾಲುವೆ, ಸ್ಮಾರಕ, ಸಾರ್ವಜನಿಕ ರಸ್ತೆ ಇರುವುದಿಲ್ಲ, ಇದು ಖಾಸಗಿ ಜಮೀನು ಎಂದು ವಿವರಿಸಿದ್ದರು. ಅಲ್ಲದೆ ತಮ್ಮ ವರದಿಯಲ್ಲಿ ದೇವಸ್ಥಾನಕ್ಕೂ ಕಲ್ಲಿನ ಕ್ವಾರಿಗೂ ಇರುವ ಅಂತರ 7 ಕಿ.ಮೀ ಎಂದು ತಿಳಿಸಿದ್ದಾರೆ.

ಆದರೆ ನೂತನ ವರದಿಯಲ್ಲಿ 95 ಮೀಟರ್ ಅಂತರವಿರುವುದು  ಕಂಡುಕೊಳ್ಳ ಲಾಗಿದೆ. ಜತೆಗೆ ಶಾಲೆಗೆ ಇರುವ ಅಂತರ 2 ಕಿ.ಮೀ., ರಾಷ್ಟ್ರೀಯ ಹೆದ್ದಾರಿ 2 ಕಿ.ಮೀ. ಸಂಪರ್ಕ ರಸ್ತೆ 400 ಮೀಟರ್, ಜಿಲ್ಲಾ ಕೇಂದ್ರ 25 ಕಿ.ಮೀ., ಸೇಫ್ ಜೋನ್ ಅಂತರ 8 ಕಿ.ಮೀ., ಹೊಸದಾಗಿ ಇರುವ ಮನೆಗೆ ಇರುವ ಅಂತರ 100 ಮೀಟರ್, ವಾಸ ಮಾಡುತ್ತಿರುವ ಮನೆಗೆ ಇರುವ ಅಂತರ 300 ಮೀಟರ್, ನದಿಯಿಂದ ಇರುವ ಅಂತರ 6 ಕಿ.ಮೀ., ಲಿಂಕ್ ರಸ್ತೆಯಿಂದ 500 ಮೀಟರ್, ಕೃಷಿ ಭೂಮಿಯಿಂದ 400 ಮೀಟರ್, ಅರಣ್ಯ ಭೂಮಿಯಿಂದ 12 ಕಿ.ಮೀ., ಪಿಡಬ್ಲ್ಯುಡಿ ರಸ್ತೆ 2 ಕಿ.ಮೀ. ಅಂತರವಿರುವುದು ನಮೂದಿಸಲಾಗಿದೆ. ಇದನ್ನು ದಿನಕರ ರೈ ಎಂಬವರು ಮಾಹಿತಿ ಹಕ್ಕು ಮೂಲಕ ಕಂಡು ಕೊಂಡಿದ್ದಾರೆ.

ಗಿರೀಶ್‌ ಮಳಲಿ

**

2 ವರ್ಷದಿಂದ

ಹೋರಾಟ
ಕಳೆದ ಎರಡು ವರ್ಷಗಳಿಂದ ಸ್ಥಳೀಯರು ಕಲ್ಲಿನ ಕ್ವಾರಿಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದಾರೆ. ಅಲ್ಲದೆ ಕಳೆದ ವರ್ಷ ಕ್ವಾರಿ ವಿರುದ್ಧ ಹೋರಾಟ ನಡೆಸಿದ್ದ ವಾಮನ್ ಪೂಜಾರಿ ಎಂಬವರ ಕೊಲೆಯತ್ನವೂ ನಡೆದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.