ADVERTISEMENT

ಜಳಕದ ಸ್ಥಳಕ್ಕೂ ಬೇಕು ಅಭಿವೃದ್ಧಿ

ಗಿರೀಶ್ ಮಳಲಿ
Published 18 ನವೆಂಬರ್ 2017, 5:25 IST
Last Updated 18 ನವೆಂಬರ್ 2017, 5:25 IST
ಪೊಳಲಿಯ ಸುಬ್ರಹ್ಮಣ್ಯ ಸ್ವಾಮಿಯ ಬಲಿಮೂರ್ತಿಯನ್ನು ಆರಾಡ ದಿನದಂದು ಜಳಕ ಮಾಡುವ ಸ್ಥಳವನ್ನು ರಿಂಗ್ ಹಾಕಿ ನಿರ್ಮಿಸಿರುವುದು
ಪೊಳಲಿಯ ಸುಬ್ರಹ್ಮಣ್ಯ ಸ್ವಾಮಿಯ ಬಲಿಮೂರ್ತಿಯನ್ನು ಆರಾಡ ದಿನದಂದು ಜಳಕ ಮಾಡುವ ಸ್ಥಳವನ್ನು ರಿಂಗ್ ಹಾಕಿ ನಿರ್ಮಿಸಿರುವುದು   

ಬಜ್ಪೆ: ಪೊಳಲಿ ರಾಜರಾಜೇಶ್ವರಿ ದೇಗುಲವು ಬಹುಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೇರಳ ಶೈಲಿಯಲ್ಲಿ ನಿರ್ಮಾಣವಾಗುತ್ತಿದೆ. ಆದರೆ, ಜಾತ್ರಾ ಸಮಯದ ಅಂತಿಮ ದಿನವಾದ ಆರಡದಂದು ದೇಗುಲದ ಬಲಿಮೂರ್ತಿ ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಯನ್ನು ಫಲ್ಗುಣಿ ನದಿಯಲ್ಲಿರುವ ಒಂದು ಭಾಗದಲ್ಲಿ ಜಳಕ ಮಾಡಿಸಲಾಗುತ್ತಿದ್ದು, ಅವರ ನವೀಕರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಳಲಿ ದೇಗುಲದ ದರುಶನ ಮಾಡುವ ಮುಂಚೆ, ಈ ಭಾಗದಲ್ಲಿ ಸ್ನಾನ ಮಾಡಿ, ಬಳಿಕ ದೇಗುಲಕ್ಕೆ ತೆರಳಿದರೆ ಭಾರಿ ಪುಣ್ಯವೆಂದು ನಂಬಲಾಗುತ್ತಿದೆ. ಆದರೆ ಇಂದು ಆ ಪರಂಪರೆ ನಶಿಸಿಹೋಗಿದೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ದೇವರ ಜಳಕಕ್ಕೆ ಬೇಕಾದ ಸುಂದರ ಸ್ಮಾರಕವನ್ನು ನಿರ್ಮಿಸಬೇಕಿತ್ತು. ಆದರೆ ಇದರ ಬಗ್ಗೆ ಯಾರೂ ಮನಸ್ಸು ಮಾಡದಿರುವುದು ಕ್ಷೇತ್ರದ ಭಕ್ತರಲ್ಲಿ ಬೇಸರ ಮೂಡಿಸಿದೆ.

ಎಲ್ಲಿದೆ ಇದು?: ದೇವರ ಜಳಕದ ಸ್ಥಳ ಪೊಳಲಿ ಹಾಗೂ ಮಳಲಿಯನ್ನು ಸಂಪರ್ಕಿಸುವ ಭಾಗದಲ್ಲಿ ಇದೆ. ಇದು ಕುರುವೆಮಾರ್ ಎಂಬ ಪ್ರದೇಶಕ್ಕೆ ಹತ್ತಿರವಾಗಿದೆ. ಪೊಳಲಿಯಲ್ಲಿ ಒಂದು ತಿಂಗಳು ಜಾತ್ರೆ ನಡೆದ ಬಳಿಕ ಆರಾಡದ ದಿನದಂದು ದೇವರ ಬಲಿಮೂರ್ತಿಯನ್ನು ತಲೆಯಲ್ಲೇ ಹೊತ್ತುಕೊಂಡು ಬಂದು ಇಲ್ಲಿ ಜಳಕ ಮಾಡಿ, ಧ್ವಜಾವರೋಹಣ ಆದ ಬಳಿಕ ಒಂದು ತಿಂಗಳ ಜಾತ್ರೆಗೆ ತೆರೆ ಬೀಳುತ್ತದೆ. ಜಳಕದ ಭಾಗದಲ್ಲಿ ರಿಂಗ್‌ಗಳನ್ನು ಬಳಸಿ, ಬಾವಿಯಂತೆ ರಚನೆ ಮಾಡಲಾಗಿದ್ದು, ಇದಕ್ಕೆ ಸ್ಥಳೀಯರು ಪಂಪ್ ಅಳವಡಿಸಿ ನೀರೆತ್ತುತ್ತಿದ್ದಾರೆ.

ADVERTISEMENT

ಪುಣ್ಯಪ್ರದೇಶವಾಗಿರುವ ಈ ಭಾಗದಲ್ಲಿ ಸುಂದರವಾದ ರಚನೆಯನ್ನು ಕೈಗೊಂಡು, ಭಕ್ತರಿಗೆ ಸ್ನಾನ ಮಾಡಲೂ ಆಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಯಾರೂ ಈ ಬಗ್ಗೆ ಆಸಕ್ತಿ ವಹಿಸಿಲ್ಲ. ಈ ಪೌರಾಣಿಕ ಸ್ಥಳವನ್ನು ಬಿಟ್ಟು, ಬೇರೆಯೇ ಜಾಗದಲ್ಲಿ ಜಳಕದ ಭಾಗವನ್ನು ನಿರ್ಮಿಸಬೇಕೆಂದು ಕೆಲವರು ಒತ್ತಾಯಿಸಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆರಾಡ ದಿನದಂದು ಪೊಳಲಿಯ ಚೆಂಡಿನ ಗದ್ದೆಯಾಗಿ, ಅಖಿಲೇಶ್ವರ ದೇವಸ್ಥಾನ ಮುಂಭಾಗ ಕುಡರಿಗುಡ್ಡೆಯ ಮೂಲಕ ಹಲವಾರು ಕಟ್ಟೆ ಪೂಜೆ ನಡೆಸಿ ದೇವರ ಜಳಕವಾಗುತ್ತದೆ. ಆದ್ದರಿಂದ ಜಳಕದ ಭಾಗದಲ್ಲಿ ಸುಂದರವಾದ ನಿರ್ಮಾಣ ಕಾರ್ಯ ನಡೆಯಬೇಕಿತ್ತು ಎಂಬುದು ಭಕ್ತರ ಅಭಿಪ್ರಾಯ.

ಸೇತುವೆ ನಿರ್ಮಿಸಿ
ಹತ್ತಿರದಲ್ಲಿಯೇ ಮಳಲಿಯ ಭಕ್ತರು ಪೊಳಲಿಗೆ ಬರಬೇಕಾದರೆ, ಕೇವಲ ಹತ್ತು ನಿಮಿಷ ಸಾಕು. ಆದರೆ, ಸೇತುವೆ ಇಲ್ಲದೇ ಒಂದು ಗಂಟೆ ಬಸ್‌ನಲ್ಲಿ ಪ್ರಯಾಣಿಸಬೇಕಾಗಿದೆ. ಕಾಲ್ನಡಿಗೆಯ ಮುಖಾಂತರ ಫಲ್ಗುಣಿ ನದಿಯನ್ನು ದಾಟಲು ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಭಕ್ತರದ್ದು.

ಕಳೆದ ಬಾರಿಯ ಜಾತ್ರೆಯ ಸಂದರ್ಭ ಊರ ನಾಗರಿಕರು ಮರಳಿನಿಂದಲೇ ಹಾದಿ ನಿರ್ಮಾಣ ಮಾಡಿದ್ದರು. ಆದರೆ ಈ ಬಾರಿ ಪೊಳಲಿಗೆ ತೆರಳುವಂತಿಲ್ಲ. ಈ ಭಾಗದಲ್ಲಿ ಮುಳುಗು ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ, ಅದನ್ನು ಬೇರೊಂದು ರಸ್ತೆಗೆ ವಿನಿಯೋಗಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.