ADVERTISEMENT

‘ಟೋಲ್‌ ಸಂಗ್ರಹ ದರೋಡೆಗೆ ಸಮ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 5:15 IST
Last Updated 28 ನವೆಂಬರ್ 2017, 5:15 IST

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಪ್ರಾಧಿಕಾರದ ಕಾನೂನಿನಂತೆ ಯಾವುದೇ ಸೌಲಭ್ಯ ಗಳಿಲ್ಲ. ಹೆದ್ದಾರಿ ಕೆಟ್ಟು ಹೋಗಿದ್ದು, ಪ್ರಾಣ ಹಾನಿ ಸಂಭವಿಸುತ್ತಿದೆ. ಹೀಗಿರುವಾಗ ಮೂರು ಕಡೆಗಳಲ್ಲಿ ಟೋಲ್ ಪಡೆಯುತ್ತಿರುವುದು ದರೋಡೆಗೆ ಸಮಾನವಾಗಿದೆ. ತಕ್ಷಣ ಸುರತ್ಕಲ್, ಬಂಟ್ವಾಳ ಟೋಲ್ ಕೇಂದ್ರವನ್ನು ಮುಚ್ಚಬೇಕು ಎಂದು ಶಾಸಕ ಮೊಯಿದ್ದೀನ್‌ ಬಾವಾ ಆಗ್ರಹಿಸಿದರು.

ಹೆದ್ದಾರಿ 66ರ ಹೊನ್ನಕಟ್ಟೆ, ಬೈಕಂಪಾಡಿ, ಕೂಳೂರು ಮತ್ತಿತರೆಡೆ ಹೊಂಡದಿಂದ ತುಂಬಿರುವ ಹೆದ್ದಾರಿ ಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಸೋಮವಾರ ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ ನೇತೃತ್ವದಲ್ಲಿ ಹೊನ್ನಕಟ್ಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ‘ಟೋಲ್ ಮುಂಭಾಗ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ. ಯಾವುದೇ ಗಂಭೀರ ಪರಿಣಾಮ ಉಂಟಾದರೂ, ಹೆದ್ದಾರಿ ಇಲಾಖೆ ಮತ್ತು ಸಂಸದ ನಳಿನ್‌ ಕುಮಾರ್ ಅವರೇ ನೇರ ಹೊಣೆಗಾರರು ಎಂದು ಹೇಳಿದರು. ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಮಾತನಾಡಿದರು.

ADVERTISEMENT

ಗಿರೀಶ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಉತ್ತಮ್ ಆಳ್ವ, ಹಬೀಬ್, ಸೊಹೈಲ್, ಶೊಯಿಬ್, ರವಿ ಶ್ರೀಯಾನ್, ಶಕುಂತಳಾ ಕಾಮತ್, ಪುರುಷೋತ್ತಮ್ ಚಿತ್ರಾಪುರ, ಕುಮಾರ್ ಮೆಂಡನ್, ಗುಲ್ಜಾರ್ ಬಾನು, ಬಾವಾ, ಸೊಹೈಲ್, ಜೈಸನ್, ಅಕ್ಬರ್ ಮುಕ್ಕ, ಪುರುಷೋತ್ತಮ್ ಮುಕ್ಕ, ಇಲ್ಯಾಸ್, ಹರೀಶ್ ಬಂಗೇರ, ರಾಜೇಶ್ ಕುಳಾಯಿ, ಸಚಿನ್ ಅಡಪ, ಅಶ್ರಫ್ ಅಡ್ಯಾರ್, ಅದ್ದು ಜಲೀಲ್, ಮಲ್ಲಿಕಾರ್ಜುನ್, ಶ್ರೀಧರ್ ಪಂಜ, ರೂಪೇಶ್ ರೈ, ವರುಣ್ ಅಂಬಟ್, ಆನಂದ್ ಅಮೀನ್, ರೆಹಮಾನ್ ಕುಂಜತ್ತಬೈಲ್, ಆಲಿ ಕೂಳೂರು ಪಾಲ್ಗೊಂಡಿದ್ದರು.

ಹೆದ್ದಾರಿಯಲ್ಲಿ ಕ್ರಿಕೆಟ್‌
ಹೆದ್ದಾರಿ ತಡೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಕ್ರಿಕೆಟ್ ಆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ನಡೆಸಲಾಯಿತು.

ನಂತರ ಸ್ಥಳಕ್ಕೆ ಬಂದ ಎಂಜಿನಿಯರ್ ಅಜಿತ್ ಮಾತನಾಡಿ, ರಸ್ತೆ ದುರಸ್ತಿಗೆ ₹8 ಕೋಟಿ ಮೊತ್ತದ ಟೆಂಡರ್ ಆಗಿದ್ದು, ಡಿಸೆಂಬರ್ 15ರ ಒಳಗಾಗಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ ಎಂದು ಭರವಸೆ ನೀಡಿದರು.

ಕಾಮಗಾರಿ ಪೂರ್ಣವಾಗುವವರೆಗೆ ಟೋಲ್ ರದ್ದುಪಡಿಸಲು ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಕ್ರಮ ಕೈಗೊಳ್ಳದೇ ಹೋದಲ್ಲಿ ಟೋಲ್ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.