ADVERTISEMENT

ದೇಶದ ಎಲ್ಲೆಡೆಗೆ ಯೋಗ ಗ್ರಾಮ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 5:28 IST
Last Updated 22 ನವೆಂಬರ್ 2017, 5:28 IST
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಯೋಗೋತ್ಸವದಲ್ಲಿ ಕೇಂದ್ರದ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಮಾತನಾಡಿದರು.
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಯೋಗೋತ್ಸವದಲ್ಲಿ ಕೇಂದ್ರದ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಮಾತನಾಡಿದರು.   

ಉಜಿರೆ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಲು ಈಗಾಗಲೇ ಕೆಲವು ಸ್ಥಳಗಳಲ್ಲಿ ಯೋಗ ಗ್ರಾಮಗಳನ್ನು ರೂಪಿಸಿದ್ದು, ಇದನ್ನು ದೇಶದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಕೇಂದ್ರದ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದರು.

ಧರ್ಮಸ್ಥಳದಲ್ಲಿ ಮಂಗಳವಾರ ಆರಂಭವಾದ ಅಂತರರಾಷ್ಟ್ರೀಯ ಯೋಗೋತ್ಸವ ಮತ್ತು ಎರಡನೇ ಒಕ್ಕೂಟ ಯೋಗ ಕ್ರೀಡಾ ಕಪ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಗೋವಾದಲ್ಲಿ ಸದ್ಯದಲ್ಲಿಯೇ ನೂತನ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ಪ್ರಾರಂಭಿಸಲಾಗುವುದು’ ಎಂದರು.

ಉಜಿರೆಯಲ್ಲಿರುವ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ದೇಶದಲ್ಲಿಯೇ ಪ್ರಥಮ ಉತ್ಕೃಷ್ಟತಾ ಕಾಲೇಜು ಎಂದು ಆಯುಷ್ ಸಚಿವಾಲಯದಿಂದ ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಿಸಿದ ಸಚಿವರು, ಮಂಡ್ಯ ಜಿಲ್ಲೆಯ ನಾಗಮಂಗಲ, ಭುವನೇಶ್ವರ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಸದ್ಯದಲ್ಲಿಯೇ ಆರಂಭಗೊಳ್ಳಲಿವೆ ಎಂದರು.

ADVERTISEMENT

ಪುಣೆಯಲ್ಲಿರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಅಭಿವೃ ದ್ಧಿಪಡಿಸಿ ಅಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಹಾಗೂ ದೇಶ ದೆಲ್ಲೆಡೆ ನೂರು ಯೋಗ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬದಲಾಯಿಸಿ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸದಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದು ಸಚಿವರು ತಿಳಿಸಿದರು.

ಯೋಗೋತ್ಸವವನ್ನು ಉದ್ಘಾಟಿಸಿದ ಆಸ್ಟ್ರಿಯಾದ ಮಹಾಮಂಡಲೇಶ್ವರ ಪರ ಮಹಂಸ ಸ್ವಾಮಿ ಮಹೇಶ್ವರಾ ನಂದಜಿ ಮಾತನಾಡಿ, ಯೋಗ ಎಂಬುದು ಧರ್ಮ ಅಲ್ಲ. ಅದು ಕಲೆಯೂ, ವಿಜ್ಞಾನವೂ ಆಗಿದೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಹೊಂದಬಹುದು. ಯೋಗ ಶಿಕ್ಷಕರು ತಪ್ಪು ಮಾಹಿತಿ ನೀಡಬಾರದು ಎಂದರು.

ಆಧುನಿಕ ಜೀವನ ಶೈಲಿ ಮತ್ತು ತಂತ್ರ ಜ್ಞಾನಕ್ಕೆ ದಾಸರಾಗಿ ನಾವು ಆರೋಗ್ಯ ಭಾಗ್ಯವನ್ನು ಕಳೆದು ಕೊಳ್ಳಬಾರದು. ಪಾಶ್ಚಾತ್ಯದ ಭೋಗ ಜಿವನಕ್ಕೆ ಬಲಿಯಾ ಗದೆ ಭಾರತದ ಯೋಗ ಜೀವನ ಮಾಡಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಯೋಗ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಅಗರ್‌ ವಾಲ್‌ ಯೋಗೋತ್ಸವದ ಮಾಹಿತಿ ನೀಡಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಾ.ಪ್ರಶಾಂತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

* * 

ಬೆಂಗಳೂರು ಮತ್ತು ದುಬೈನಲ್ಲಿ ಶೀಘ್ರದಲ್ಲೇ ನೂತನ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸಲಾಗುವುದು
ಡಿ.ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.